ರಾಯಬಾಗ: ತಾಲೂಕಿನ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಸಂಚರಿಸಲು ಹರಸಾಹಸಪಡುವಂತಾಗಿದೆ. ರಾಯಬಾಗ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಹಾದು ಹೋಗಿರುವ ರಾಯಬಾಗ-ಹಾರೂಗೇರಿ ರಸ್ತೆ ಕಾಮಗಾರಿ ವಿಳಂಬದಿಂದಾಗಿ ರಸ್ತೆಯಲ್ಲಿ ತಗ್ಗು-ಗುಂಡಿಗಳೇ ಹೆಚ್ಚಾಗಿವೆ. ಮಳೆ ಪ್ರಾರಂಭವಾಗಿದ್ದರಿಂದ ರಸ್ತೆಯು ಸಂಪೂರ್ಣ ಕೆಸರು ಗದ್ದೆಯಾಗಿ ಮಾರ್ಪಾಡಾಗಿದ್ದು, ದ್ವಿಚಕ್ರ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಕೆಸರಲ್ಲಿ ಜಾರಿ ಬೀಳುವುದು ಗ್ಯಾರಂಟಿ. ಸುಮಾರು ವರ್ಷಗಳಿಂದ ಈ ರಸ್ತೆ ಹಾಳಾಗಿದ್ದರೂ ಲೋಕೋಪಯೋಗಿ ಇಲಾಖೆ ಅಕಾರಿಗಳು ಮಾತ್ರ ಕಂಡೂ ಕಾಣದಂತೆ ಜಾನವೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶ ಕಾರಣವಾಗಿದೆ
ಗೋಕಾಕ ಮತ್ತು ನಿಪ್ಪಾಣಿ-ಮಹಾಲಿಂಗಪೂರ ರಾಜ್ಯ ಹೆದ್ದಾರಿ ಸಂಪರ್ಕಿಸುವ ರಾಯಬಾಗ ಫ್ಯಾಕ್ಟರಿ ಕ್ರಾಸ್‌ನಿಂದ ಕಂಕಣವಾಡಿವರೆಗೆ ಸುಮಾರು 15 ಕಿ.ಮೀ ರಸ್ತೆಯ ಬಹುಭಾಗ ಹದಗೆಟ್ಟಿದ್ದು, ಈ ರಸ್ತೆಯಲ್ಲಿ ಅಲ್ಲಲ್ಲಿ ಆಳವಾದ ತಗ್ಗು-ಗುಂಡಿಗಳು ನಿರ್ಮಾಣಗೊಂಡಿವೆ. ದ್ವಿಚಕ್ರ ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ರಾಯಬಾಗ ಸಕ್ಕರೆ ಕಾರ್ಖಾನೆಯಿಂದ ಮೇಖಳಿ ಗ್ರಾಮದ ವರೆಗೆ ಇಬ್ಬರು ಗುತ್ತಿಗೆದಾರರು ರಸ್ತೆ ನಿರ್ಮಿಸಿದ್ದು, ಸುಮಾರು 30 ಮೀಟರ್ ರಸ್ತೆ ನಿರ್ಮಿಸದೆ ಹಾಗೇ ಬಿಟ್ಟಿದ್ದರಿಂದ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.
ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಹರಸಾಹಸಪಡುವಂತಾಗಿದೆ. ಎದುರಿಗೆ ಭಾರಿ ವಾಹನ ಬಂದರೆ ದ್ವಿಚಕ್ರ ವಾಹನ ಸವಾರರು ದಾಟಲು ಸಾಹಸ ಮಾಡಬೇಕಾಗುತ್ತದೆ. ತಗ್ಗು-ಗುಂಡಿಗಳಲ್ಲಿ ಮಳೆ ಸಂಗ್ರಹವಾಗುವುದರಿಂದ ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸುವುದು ಕಷ್ಟವಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಗುಂಡಿ ಆಳ ಅರಿಯದೆ ಅದರಲ್ಲಿ ಬಿದ್ದು ಕೈಕಾಲು ಮುರಿದುಕೊಂಡ ಉದಾಹರಣೆಗಳೂ ಇವೆ. ಇನ್ನಾದರೂ ಸಂಬಂಧಪಟ್ಟ ಅಕಾರಿಗಳು ಮತ್ತು ಜನಪ್ರತಿನಿಗಳು ಇತ್ತ ಗಮನಹರಿಸಿ ರಸ್ತೆ ಸುಧಾರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಲೋಕೋಪಯೋಗಿ ಕಚೇರಿ ಎದುರು ಹಾದು ಹೋಗಿರುವ ರಸ್ತೆ ಸರ್ವೇ ಮಾಡುವ ಕೆಲಸ ಬಾಕಿ ಇದ್ದುದರಿಂದ ರಸ್ತೆ ಕಾಮಗಾರಿ ವಿಳಂಬವಾಗಿದೆ.
ರಾಯಬಾಗ-ಕಂಕಣವಾಡಿ ರಸ್ತೆಯ ಗುರುದೇವ ಮಂದಿರದಿಂದ ಕಂಕಣವಾಡಿವರೆಗೆ 8 ಕಿ.ಮೀ ಟೆಂಡರ್ ಆಗಿದ್ದು, ಮಳೆ ನಿಂತ ಮೇಲೆ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸುತ್ತಾರೆ. ಮೇಖಳಿ-ರಾಯಬಾಗ ಕ್ರಾಸ್ ಮಧ್ಯದ 30 ಮೀಟರ್ ರಸ್ತೆಯು ಎಸ್ಟಿಮೇಟ್‌ದಲ್ಲಿ ಇಲ್ಲದಿರುವುದರಿಂದ ಕಾಮಗಾರಿ ಮಾಡಿಲ್ಲ. ಹೊಸ ಎಸ್ಟಿಮೇಟ್ ಮಾಡಿ ರಸ್ತೆ ಮಾಡಲಾಗುವುದು.ಕೆ.ಎನ್.ಹಂಚಿನಮನಿ.ಎಇಇ ಲೋಕೋಪಯೋಗಿ ಇಲಾಖೆ ರಾಯಬಾಗ