ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಇಪ್ಪತ್ತೊಂದನೆಯ ಶತಮಾನದ ಮೊದಲ ಕಾಲುಭಾಗವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಈ ವರ್ಷ ಬಹಳ ಮಹತ್ವದ್ದು. ಹಲವು ನೂತನ ಯೋಜನೆಗ ಳೊಂದಿಗೆ, ಹಿಂದಿನ ಅಭಿವೃದ್ಧಿ ಕೆಲಸಗಳೂ ಕೋಟೆನಾಡಲ್ಲಿ ಸಾಕಾರಗೊಳ್ಳುತ್ತವೆ ಎಂಬ ನಿರೀಕ್ಷೆಯೊಂದಿಗೆ ಜನತೆ 2025ರ ಸ್ವಾಗತಕ್ಕೆ ಸಜ್ಜಾಗಿದೆ. ಪ್ರಮುಖ ಯೋಜನೆಗಳ ಅನುಷ್ಠಾನ ಹಾಗೂ ಪ್ರಗತಿಯಲ್ಲಿರುವ ಯೋಜನೆಗಳು ಗುರಿ ತಲುಪುವಲ್ಲಿ ನೂತನ ವರ್ಷ ನಿರ್ಣಾಯಕವಾಗಲಿ ಎಂಬುದು ಆಶಯ ಹೊರಹೊಮ್ಮಿದೆ.
ಸಸಾರವಾಗಲಿ ಸಂಚಾರ
ಶಂಕುಸ್ಥಾಪನೆಯಾಗಿರುವ ಚಿತ್ರದುರ್ಗದ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡು ಸುಸಜ್ಜಿತ ಸೇವೆ ದೊರೆಯುವ ನಿರೀಕ್ಷೆ ಪ್ರಯಾಣಿಕರದು. ಹೊಳಲ್ಕೆರೆ ಶಾಸಕ ಡಾ.ಎಂ. ಚಂದ್ರಪ್ಪ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿದ್ದಾಗ ಚಾಲನೆ ನೀಡಿದ ನಗರದ ನೂತನ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ಹಾಗೂ ಪಾವಗಡ-ರಾಯದುರ್ಗ ರೈಲು ಮಾರ್ಗಗಳನ್ನು 2027 ಜನವರಿಯೊಳಗೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆಂದು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಈಗಾಗಲೇ ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮಾರ್ಗಗಳ ನಿರ್ಮಾಣಕ್ಕೆ ಅಗತ್ಯ ಭೂ ಸ್ವಾಧೀನ ಪ್ರಕ್ರಿಯೆ ಸಹಿತ ಕಾಮಗಾರಿಗಳಿಗೆ ಹೊಸ ವರ್ಷದಲ್ಲಿ ಇನ್ನಷ್ಟು ವೇಗ ಸಿಗುವ ಸಾಧ್ಯತೆ ಇದೆ.
ಬೆಳೆಯಬೇಕಿದೆ ಶಿಕ್ಷಣ ಕ್ಷೇತ್ರ
ಜಿಲ್ಲೆಗೆ ಮತ್ತೊಂದು ಜವಾಹರ್ ನವೋದಯ ವಿದ್ಯಾಲಯ, ಚಳ್ಳಕೆರೆಯಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ಮಂಜೂರು ಮಾಡುವಂತೆ ಸಂಸದ ಗೋವಿಂದ ಕಾರಜೋಳ ಕೇಂದ್ರಕ್ಕೆ ಮನವಿ ಮಾಡಿದ್ದು, ಇವೆರಡೂ ಶಾಲೆಗಳಿಗೆ ಅನುಮತಿ ಸಿಗುವ ನಿರೀಕ್ಷೆ ಇದೆ. ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಸಂಭವವಿದೆ. ಜಿಲ್ಲಾಸ್ಪತ್ರೆ ಹಾಸಿಗೆ ಸಾಮರ್ಥ್ಯ ಹೆಚ್ಚಳದೊಂದಿಗೆ ಮತ್ತಷ್ಟು ಸೌಲಭ್ಯಗಳೊಂದಿಗೆ ಸುಧಾರಣೆ ಕಾಣಬಹುದೆಂಬ ಆಶಾಭಾವನೆಯಿದೆ.
ಪಾಲಿಕೆಯಾಗಿ ಮೇಲ್ದರ್ಜೆಗೇರುವುದೇ?
ಚಿತ್ರದುರ್ಗ ನಗರಸಭೆಯನ್ನು ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸಬೇಕೆಂಬ ವಾದವಿತ್ತು. ಪಾಲಿಕೆಯಾದರೆ, ಐತಿಹಾಸಿಕ ನಗರಿಯ ಅಭಿವೃದ್ಧಿಗೆ ವರವಾಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಇದಕ್ಕೆ ಪೂರಕವೆಂಬಂತೆ ನಗರಾಭಿವೃದ್ಧಿ ಸಚಿವರಿಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನವಿ ಸಲ್ಲಿಸಿದ್ದಾರೆ. ಇಂಗಳ್‌ದಾಳ್ ಚಿನ್ನದಗಣಿ ಪುನರಾರಂಭಕ್ಕೂ ಕೇಂದ್ರವನ್ನು ಶಾಸಕರು ಒತ್ತಾಯಿಸಿದ್ದಾರೆ. ಅವರ ಮನವಿಗೆ ಕೇಂದ್ರದಿಂದ ಸಕರಾತ್ಮಕ ಪ್ರತಿಕ್ರಿಯೆ ದೊರಕಿದ್ದು, ಚಿನ್ನದ ಗಣಿ ಮತ್ತೆ ಆರಂಭವಾಗಬಹುದು.
ಅಭಿವೃದ್ಧಿಗಳ ಸುತ್ತಮುತ್ತ
ಪ್ರಗತಿಯಲ್ಲಿರುವ ಜಿಲ್ಲಾಡಳಿತ ಸಂಕೀರ್ಣ ಪೂರ್ಣವಾಗಬಹುದು. ಜಿಲ್ಲೆಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ಅಭಿವೃದ್ಧಿಗೆ ಗಣಿ ಅನುದಾನದಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಸಂಬಂಧಿತ ಕಾಮಗಾರಿಗಳು ಸಾಕಾರಗೊಳ್ಳುವ ನಿರೀಕ್ಷೆ ಇದೆ. ರಾಜ್ಯದ ನೀರಾವರಿ ಯೋಜನೆಗಳಿಗೆ ರೈಲ್ವೆ ಸಚಿವ ವಿ. ಸೋಮಣ್ಣ ಉಸ್ತುವಾರಿಯಾಗಿರುವುದರಿಂದ ಕೇಂದ್ರ ಸರ್ಕಾರದ ಸಹಕಾರದಿಂದ ಭದ್ರಾ ಅನುಷ್ಠಾನ ಕಾರ್ಯ ಚುರುಕಾಗಬಹುದು. ಚಿತ್ರದುರ್ಗದಲ್ಲಿ ಉದ್ದೇಶಿತ ರಸ್ತೆ ವಿಸ್ತರಣೆ ನಡೆಯಬಹುದು. ಹೀಗೆ.. ಹತ್ತು ಹಲವು ಅಭಿವೃದ್ಧಿ ಕಾರ್ಯ ಅನುಷ್ಠಾನವಾಗಬಹುದು ಎಂಬ ನಿರೀಕ್ಷೆ ಜನರಲ್ಲಿದೆ.
ಸಶಕ್ತ ರಕ್ಷಣಾ ವ್ಯವಸ್ಥೆಗೆ ಮುನ್ನುಡಿ
ಸೈನ್ಸ್ ಸಿಟಿ ಖ್ಯಾತಿ ಪಡೆದ ಚಳ್ಳಕೆರೆಯಿಂದಾಗಿ ದೇಶದ ವೈಜ್ಞಾನಿಕ ಭೂಪಟದಲ್ಲಿ ಗುರುತಿಸಿಕೊಂಡಿರುವ ಜಿಲ್ಲೆ ಮತ್ತೊಂದು ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗುವ ಕನಸು ಗರಿಗೆದರಿದೆ. ಅಂದಾಜು 34 ಸಾವಿರ ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯಲ್ಲಿ ರಷ್ಯಾ ಮಾದರಿಯಲ್ಲಿ ರಾಡಾರ್ ವ್ಯವಸ್ಥೆ ಸ್ಥಾಪನೆಯಾಗಲಿದೆ ಎಂಬ ಸುದ್ದಿ ಇದೆ. ಅಲ್ಲಿನ ಅಧ್ಯಕ್ಷ ಪುಟಿನ್ ಅವರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ನೇತೃತ್ವದ ನಿಯೋಗ ಈ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಶತ್ರುಗಳ ವೈಮಾನಿಕ ದಾಳಿ ಹಿಮ್ಮೆಟ್ಟಿಸುವ, 8 ಸಾವಿರ ಕಿ.ಮೀ.ಗಿಂತಲೂ ಅಧಿಕ ವ್ಯಾಪ್ತಿಯ ವೊರೊನೆಜ್ ರಾಡಾರ್ ಭಾರತಕ್ಕೆ ಲಭ್ಯವಾದರೆ, ಯಾವುದೇ ದಿಕ್ಕಿನಿಂದ ಬಂದ ವೈಮಾನಿಕ ದಾಳಿ ತಡೆಯಲು ಸಾಧ್ಯವಾಗಲಿದೆಯಂತೆ. ಆದರೆ, ಡಿಆರ್‌ಡಿಒ ಮತ್ತಿತರ ವೈಜ್ಞಾನಿಕ ಸಂಸ್ಥೆಗಳಿರುವ ಚಳ್ಳಕೆರೆಯಲ್ಲೇ ರಾಡಾರ್ ಸ್ಥಾಪನೆಯಾಗಬಹುದು ಎನ್ನುವ ಕುರಿತು ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.