ಧಾರವಾಡ: ನಗರದಲ್ಲಿ ಬ್ರೌನ್ಶುಗರ್ (ಮಾದಕ ವಸ್ತು) ಮಾರಾಟ ಮಾಡುತ್ತಿದ್ದ ಅಪರಾಧಿಗೆ ಜಿಲ್ಲಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ಆರೋಪಿಯ ಮೇಲ್ಮನವಿಯನ್ನು ಮಂಗಳವಾರ ವಜಾಗೊಳಿಸಿದೆ.
ಇಲ್ಲಿನ ಮೈಲಾರಲಿಂಗ ನಗರದ ಮನೆಯೊಂದರ ಮೇಲೆ 2013ರ ಜ. 31ರಂದು ದಾಳಿ ನಡೆಸಿದ್ದ ಶಹರ ಠಾಣೆ ಪೊಲೀಸರು, ಆರ್ಥರ್ ಜೋಸೆಫ್ ಎಂಬ ನೈಜೀರಿಯಾ ಪ್ರಜೆಯಿಂದ 220 ಗ್ರಾಂ ಬ್ರೌನ್ಶುಗರ್ ವಶಪಡಿಸಿಕೊಂಡಿದ್ದರು. ಆತನ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಮಾಡಿದ್ದ ಜಿಲ್ಲಾ ನ್ಯಾಯಾಲಯ, ಅಪರಾಧಿ ಆರ್ಥರ್ ಜೋಸೆಫಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ 2016ರಲ್ಲಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಆತ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಉಮಾ ಎಂ.ಜಿ. ಅವರಿದ್ದ ಏಕಸದಸ್ಯ ಪೀಠ, ಜಿಲ್ಲಾ ನ್ಯಾಯಾಲಯ ಮಾಡಿದ ಆದೇಶ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟು, ಅಪರಾಧಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. ಸರ್ಕಾರದ ಪರವಾಗಿ ವಕೀಲ ವಿನಾಯಕ ಕುಲಕರ್ಣಿ ವಾದ ಮಂಡಿಸಿದರು.
ಇಬ್ಬರ ವಿಚಾರಣೆಗೆ ಹೈಕೋರ್ಟ್ ತಡೆ
ಧಾರವಾಡ: ಇಲ್ಲಿನ ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ 5 ಮತ್ತು 6ನೇ ಆರೋಪಿಗಳ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ಪೀಠ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಕುಮಾರೇಶ್ವರ ನಗರದಲ್ಲಿ 2019ರ ಮಾ. 19ರಂದು ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿದಿತ್ತು. ಕಟ್ಟಡ ಮಾಲೀಕರು ಸೇರಿ ಒಟ್ಟು 9 ಜನರ ವಿರುದ್ಧ ಇಲ್ಲಿನ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಂಡಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅದರಲ್ಲಿರುವ 5ನೇ ಆರೋಪಿ ಇಂಜಿನಿಯರ್ ದಿಲೀಪ್ ಕುಲಕರ್ಣಿ ಹಾಗೂ 6ನೇ ಆರೋಪಿ ವಿವೇಕ ಪವಾರ, ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ತಮ್ಮ ವಿರುದ್ಧ ದಾಖಲಾಗಿರುವ ದೂರನ್ನು ರದ್ದುಪಡಿಸುವಂತೆ ಕೋರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಪ್ರಕರಣದ ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, 5 ಮತ್ತು 6ನೇೕ ಆರೋಪಿಗಳ ವಿರುದ್ಧದ ವಿಚಾರಣೆಗೆ ಮಾತ್ರ ಮುಂದಿನ ಆದೇಶದವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿ, ವಿಚಾರಣೆ ಮುಂದೂಡಿದೆ.
EndFragment