ಜಿಲ್ಲೆ

ಹತ್ತು ಕೋಟಿ ಬಿಜೆಪಿ ಸದಸ್ಯತ್ವ ನೋಂದಣಿ ಗುರಿ

ಚಿತ್ರದುರ್ಗ: ಬಿಜೆಪಿ ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯನ್ನು ಹೊಂದಿರುವ ಪಕ್ಷವೆಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಚಿತ್ರದುರ್ಗ ಬಿಜೆಪಿ ಗ್ರಾಮಾಂತರ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿ, ಕಳೆದ ಬಾರಿ ದೇಶಾದ್ಯಂತ 7 ಕೋಟಿ ಜನರು ಸದಸ್ಯತ್ವ ಪಡೆದಿದ್ದರು. ಈ ಬಾರಿ ಇದನ್ನು 10 ಕೋಟಿಗೆ ಏರಿಸುವ ಗುರಿ ಇದೆ ಎಂದರು.
ನರೇಂದ್ರ ಮೋದಿ ಅವರು ಸತತ 3ನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿ ಮತ್ತೆ ಅಧಿಕಾರ ಹಿಡಿಯಲಿದೆ. ಕೇಂದ್ರದಲ್ಲೂ ಬಿಜೆಪಿ ಅಧಿಕಾರವನ್ನು ಮತ್ತೆ ಹಿಡಿದು ಮೋದಿ ಅವರೇ ನಾಲ್ಕನೇ ಬಾರಿಗೂ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.
ಪಂಡಿತ್ ಜವಾಹರಲಾಲ್ ನೆಹರು ಅವರ ನಂತರ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿರುವ ದಾಖಲೆ ಮೋದಿ ಅವರದ್ದಾಗಿದೆ. ಮೋದಿ, ಗೃಹಸಚಿವ ಅಮಿತ್‌ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ ಬಿಜೆಪಿ ಅತ್ಯಂತ ಬಲಿಷ್ಠವಾಗಿ ಬೆಳೆಯುತ್ತಿದೆ ಎಂದರು.
ವಿರೋಧ ಪಕ್ಷಗಳು ಎಷ್ಟೇ ಅಪಪ್ರಚಾರ ಮಾಡಿದರೂ ದೇಶ, ಕರ್ನಾಟಕದ ಜನರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದರಿಂದ ಸಂಸತ್ತಿನಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಕೇಂದ್ರ ಸರ್ಕಾರ 2047ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದೆ. ಮೋದಿ ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ಕೊಡುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಸದಸ್ಯತ್ವ ನೋಂದಣಿ 2 ಹಂತಗಳಲ್ಲಿ 45 ದಿನಗಳ ಕಾಲ ನಡೆಯಲಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ದಾಖಲೆ ಆಗಲಿದೆ. ಕಳೆದ ಬಾರಿ 1.04 ಕೋಟಿ ಸದಸ್ಯರ ನೋಂದಣಿ ಆಗಿತ್ತು. ಅದನ್ನು ಮೀರಿ ಸದಸ್ಯತ್ವ ನೋಂದಣಿ ಮಾಡುವ ಸಂಕಲ್ಪ ನಮ್ಮದು. ಪ್ರತಿ ಬೂತ್‌ನಲ್ಲಿ ಅಂದಾಜು 400 ಸದಸ್ಯರ ಗುರಿ ಇದೆ. ಕಾಂಗ್ರೆಸ್ ನಾಯಕರ ಪಕ್ಷ, ನಮ್ಮದು ಕಾರ್ಯಕರ್ತರ ಪಾರ್ಟಿ ಎಂದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದ ಈ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನದ ಜತೆಗೆ ಮೋದಿ ಅವರ ವಿಕಸಿತ ಭಾರತದ ಸಂಕಲ್ಪಕ್ಕೆ ದೊಡ್ಡ ಶಕ್ತಿ ತುಂಬ ಬೇಕಿದೆ ಎಂದು ತಿಳಿಸಿದರು.
1980ರಲ್ಲಿ ಶೇ.1ಮತ ಪಡೆದರೆ ಖುಷಿ ಪಡುವ ಪಕ್ಷ ನಮ್ಮದಾಗಿತ್ತು. ಇದೀಗ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿದೆ. ನಮ್ಮ ಶಕ್ತಿ ಏರುಮುಖದಲ್ಲಿದ್ದರೆ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಸಂಖ್ಯೆ ದೇಶದಲ್ಲಿ ಇಳಿಮುಖವಾಗುತ್ತಿದೆ. ಈ ಬಾರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಸದಸ್ಯತ್ವವನ್ನು ನೋಂದಾಯಿಸ ಬೇಕಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಎ.ಮುರಳಿ, ಸುರೇಶ್ ಸಿದ್ದಾಪುರ, ಸಂಪತ್‌ಕುಮಾರ್, ಮಲ್ಲಿಕಾರ್ಜುನ್, ಕಲ್ಲೇಶಯ್ಯ, ಶೈಲಜಾರೆಡ್ಡಿ, ವೀರೇಶ ಜಾಲಿಕಟ್ಟೆ,ದಗ್ಗೆ ಶಿವಪ್ರಕಾಶ್, ಸುರೇಶ್, ವಸಂತ, ಸತ್ಯನಾರಾಯಣ, ವೀಣಾ ಶೀಲಾ, ಶಾಂತಮ್ಮ ಕಾಂಚನಾ ಮತ್ತತಿರರು ಇದ್ದರು.