ಕೊಡೇಕಲ್ ವಲಯದ ಎರೆ ಭೂಮಿಯಲ್ಲಿ ಹತ್ತಿ ಬೆಳೆಗೆ ರೋಗಬಾಧೆ ಕಂಡುಬಂದಿರುವುದು. 
ಜಿಲ್ಲೆ

ಹತ್ತಿಗೆ ರೋಗಬಾಧೆ ಅನ್ನದಾತ ಆತಂಕ

ರಾಜು ಯಮಕನಮರಡಿ

ಕೊಡೇಕಲ್: ಮಳೆ ಕೊರತೆ ನಡುವೆಯೂ ಉತ್ತಮವಾಗಿ ಬೆಳೆದ ಹತ್ತಿ ಬೆಳೆಗೆ ರೋಗಬಾಧೆ ಕಾಡಲಾರಂಭಿಸಿದ್ದು, ಇದರಿಂದ ರೈತರು ಮತ್ತೆ ಆತಂಕ ಎದುರಿಸುವಂತಾಗಿದೆ.

ಈ ವರ್ಷ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದಿದ್ದರೂ ಕೂಡ ಆಗಾಗ ಸುರಿದ ಮಳೆಯಿಂದ ವಲಯದಲ್ಲಿ ಅಂದಾಜು ೧೪೦೦ರಿಂದ ೧೫೦೦ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಇದೀಗ ಕಾಯಿ ಕಟ್ಟುತ್ತಿರುವ ಬೆಳೆಗೆ ತಾಮ್ರ, ಎಲೆ ಚುಕ್ಕಿ ಮತ್ತು ಮಜ್ಜಿಗೆ ರೋಗ ಕಾಣಿಸಿಕೊಂಡಿದ್ದು, ಈ ರೋಗ ನಿಯಂತ್ರಣಕ್ಕಾಗಿ ದುಬಾರಿ ಬೆಲೆಯ ಕ್ರಿಮಿನಾಶಕ ಸಿಂಪರಣೆ ಮಾಡಿದರೂ ಹತೋಟಿಗೆ ಬಾರದ ಕಾರಣ ರೈತರಿಗೆ ಇಳುವಳಿ ಕುಸಿತದ ಭೀತಿ ಕಾಡಲಾರಂಭಿಸಿದೆ.

ಈಗಾಗಲೇ ನಾಲ್ಕು ಬಾರಿ ಕ್ರಿಮಿನಾಶಕ ಸಿಂಪರಣೆ ಮಾಡಿ ಸೋತು ಸುಣ್ಣವಾಗಿದ್ದ ರೈತರು ಈವರೆಗೆ ಖರ್ಚು ಮಾಡಿದ ಇಳುವರಿ ಬಂದರೆ ಸಾಕು ಎಂಬಂತಾಗಿದೆ.

ದುಬಾರಿ ಬೆಲೆಯ ಹತ್ತಿ ಬೀಜ ತಂದು ಬಿತ್ತನೆ ಮಾಡಲಾಗಿದೆ. ಆದರೆ ಇದೀಗ ಬೆಳೆಗೆ ರೋಗ ಕಾಣಿಸಿಕೊಂಡಿದ್ದು, ಹತೋಟಿಗೆ ಬರುತ್ತಿಲ್ಲ. ಇದರಿಂದಾಗಿ ಸಮರ್ಪಕ ಇಳುವರಿ ಬಾರದೆ ನಷ್ಟದ ಭೀತಿ ಎದುರಾಗಿದೆ.
| ಶ್ರೀಶೈಲ ಸಜ್ಜನ್ ಕೊಡೇಕಲ್ ರೈತ

ಹತ್ತಿ ಬೆಳೆಗೆ ಕೆಂಪು ಮತ್ತು ತಾಮ್ರ ರೋಗ ಕಾಣಿಸಿಕೊಂಡಿದ್ದು, ಆರಂಭದ ಹಂತದಲ್ಲಿಯೇ ರೋಗ ಹತೋಟಿಗೆ ತರುವುದು ಉತ್ತಮ. ಸಾಫ್ ಪೌಡರ್, ಮ್ಯಾಗ್ನೆಸಿಯಂ ಸಲ್ಪೇಟ್ ಕ್ರಿಮಿನಾಶಕ ಸಿಂಪರಣೆ ಮಾಡುವುದರಿಂದ ರೋಗ ನಿಯಂತ್ರಣಕ್ಕೆ ತರಬಹುದು.
| ರಾಮನಗೌಡ ಪಾಟೀಲ್ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಕೊಡೇಕಲ್