ಕೊಡೇಕಲ್‌ನಲ್ಲಿ ಬೆಳೆದಿರುವ ಹತ್ತಿ ಬೆಳೆಗೆ ಮುದುಡು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಿಡಗಳು ಬಾಡುತ್ತಿರುವುದು. 
ಜಿಲ್ಲೆ

ಹತ್ತಿಗೆ ಮುದುಡು ರೋಗ ಬಾಧೆ

ಕೊಡೇಕಲ್: ಮುಂಗಾರು ಮಳೆ ಆಧರಿಸಿ ಹತ್ತಿ ಬಿತ್ತನೆ ಮಾಡಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಹೂ ಬಿಟ್ಟು ಕಾಯಿ ಗಟ್ಟಿಗೊಳ್ಳುತ್ತಿರುವ ಹಂತದಲ್ಲಿ ಮುದುಡು (ಮುರುಟು) ರೋಗ ಕಾಣಿಸಿರುವುದು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ಇತ್ತೀಚಿನ ವರ್ಷಗಳಲ್ಲಿ ಹತ್ತಿಗೆ ಒಳ್ಳೆಯ ಬೆಲೆ ಸಿಗುತ್ತಿರುವ ಕಾರಣ ಕೊಡೇಕಲ್ ಹೋಬಳಿ ಬಹುತೇಕ ರೈತರು ಹತ್ತಿ ಬಿತ್ತನೆ ಮಾಡಿದ್ದು, ಎರಡ್ಮೂರು ತಿಂಗಳ ಬೆಳೆಗಳು ಹೂ ಬಿಟ್ಟು ಕಾಯಿ ಕಟ್ಟುತ್ತಿವೆ. ಆದರೆ ಏಕಾಏಕಿ ಗಿಡದ ಎಲೆಗಳು ಮುದುಡುತ್ತಿರುವುದು ರೈತರ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿದೆ.

ಮುಂಗಾರು ಮಳೆ ಸುರಿಯುತ್ತಲೇ ರಾಯಚೂರು, ಸಿಂಧನೂರ, ಶಹಾಪುರರ ತಾಲೂಕುಗಳಿಂದ ದುಬಾರಿ ಬೆಲೆಯಲ್ಲಿ ಹತ್ತಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಬಳಿಕ ಮಳೆ ಇಲ್ಲದೆ ಬಾಡುತ್ತಿದ್ದ ಬೆಳೆಗಳಿಗೆ ಆಗಸ್ಟ್ ಮೊದಲ ವಾರ ವರುಣನ ಕೃಪೆಯಿಂದ ಬೆಳೆಗೆ ಮರುಜೀವ ಬಂದಿದ್ದು, ಸಂತಸದಲ್ಲಿದ್ದ ರೈತರು ಎಡೆ ಕುಂಟೆ ಹೊಡೆದು ಗೊಬ್ಬರ ನೀಡಿ ಕ್ರಿಮಿನಾಶಕ ಸಿಂಪಡಣೆ ಮಾಡುತ್ತ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದರು. ಆದರೀಗ ಹೂ ಬಿಟ್ಟು ಕಾಯಿ ಗಟ್ಟಿಗೊಳ್ಳುತ್ತಿರುವ ಸಂದರ್ಭದಲ್ಲಿ ಹತ್ತಿ ಗಿಡಗಳಿಗೆ ಮುದುಡು ರೋಗ ಅಂಟಿದ್ದು, ಹೂ ಮತ್ತು ಕಾಯಿಗಳಿಂದ ಕೂಡಿದ್ದ ಹತ್ತಿ ಗಿಡಗಳು ಬಾಡುತ್ತ ಸಾಗಿವೆ. ಎಕರೆಗೆ 10 ಸಾವಿರ ರೂ. ಖರ್ಚು ಮಾಡಿದ್ದÀ ರೈತರು ಇದೀಗ ಬೆಳೆ ಒಣಗುತ್ತಿರುವುದನ್ನು ನೋಡಿ ಹಾಕಿದ ಹಣವೂ ವಾಪಸ್ ಬರದಂಥ ಸ್ಥಿತಿಯಿಂದ ಚಿಂತಾಕ್ರಾAತರಾಗಿದ್ದಾರೆ.

ಪರೀಕ್ಷೆ ಮಾಡುವಂತೆ ಒತ್ತಾಯ: ಆರಂಭದಲ್ಲಿ ಕೆಲ ಹತ್ತಿ ಗಿಡಗಳು ಬಾಡುತ್ತ ಸಾಗಿದ್ದು, ಇದೀಗ ಏಕಾಏಕಿ ಬಹುತೇಕ ಹತ್ತಿ ಎಲೆಗಳಲ್ಲಿ ಮುದುಡು ರೋಗ ಕಾಣಿಸಿಕೊಂಡಿದೆ. ಯಾವ ಕಾರಣಕ್ಕೆ ಹತ್ತಿ ಎಲೆಗಳು ಮುದುಡುತ್ತಿವೆ ಎಂಬುದನ್ನು ರೈತರಿಗೆ ತಿಳಿಸಿ ಪರಿಹಾರ ನೀಡುವ ಕಾರ್ಯ ಆಗಬೇಕಿದೆ. ಕೃಷಿ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಹೋಗಿ ಬೆಳೆ ಪರೀಕ್ಷೆ ಮಾಡಿ ರೋಗದ ನಿಖರ ಕಾರಣ ಪತ್ತೆ ಹಚ್ಚಿ ನಿವಾರಣೆ ಬಗ್ಗೆ ತಿಳಿಹೇಳುವುದು ತುರ್ತು ಅಗತ್ಯವಿದೆ.