ಜಿಲ್ಲೆ

ಹತೋಟಿಗೆ ಬಾರದ ಲಿಂಪಿ ಸ್ಕಿನ್

ಶಿರಸಿ: ತಾಲೂಕಿನಾದ್ಯಂತ ಜಾನುವಾರುಗಳಿಗೆ ಲಿಂಪಿ ಸ್ಕಿನ್ ರೋಗ ವ್ಯಾಪಕವಾಗಿ ಹರಡುತ್ತಿದ್ದರೂ ಪಶುಸಂಗೋಪನಾ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಇಲಾಖೆ ವಿರುದ್ಧ ತಾಲೂಕು ಪಂಚಾಯಿತಿ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮಾಸಿಕ ಪ್ರಕತಿ ಪರಿಶೀಲನಾ ಸಭೆಯಲ್ಲಿ ಉಪಾಧ್ಯಕ್ಷ ಚಂದ್ರು ದೇವಾಡಿಗ ಮಾತನಾಡಿ, ತಾಲೂಕಿನ ವಿವಿಧೆಡೆ ಕಳೆದ 4-5 ತಿಂಗಳಿನಿಂದ ಜಾನುವಾರುಗಳಿಗೆ ಲಿಂಪಿಸ್ಕಿನ್ ರೋಗ ಕಾಣಿಸಿಕೊಂಡಿದೆ. ಈ ರೋಗ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಸಾಕಷ್ಟು ಸಂಖ್ಯೆ ಜಾನುವಾರುಗಳು ಜ್ವರದಿಂದ ಬಳಲುತ್ತಿವೆ. ಆದರೆ ಸೂಕ್ತ ಚಿಕಿತ್ಸೆ ನೀಡಬೇಕಾದ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ. ಈ ಕ್ರಮ ಸರಿಯಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಗಮನ ಹರಿಸಿ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಇದಕ್ಕೆ ಇಲಾಖೆಯ ಪಶುವೈದ್ಯ ಗಜಾನನ ಹೊಸಮನಿ ಪ್ರತಿಕ್ರಿಯಿಸಿ, ಲಿಂಪಿಸ್ಕಿನ್ ರೋಗಕ್ಕೆ ಸದ್ಯ ನಿಖರವಾದ ಔಷಧ ಲಭ್ಯವಿಲ್ಲ ಎಂದರು.

ಆರೋಗ್ಯ ಇಲಾಖೆ ಕುರಿತು ತಾಲೂಕು ಆರೋಗ್ಯಾಧಿಕಾರಿ ವಿನಾಯಕ ಭಟ್ಟ ಮಾತನಾಡಿ, ತಾಲೂಕಿನಲ್ಲಿ ಇಲ್ಲಿಯವರೆಗೆ 1533 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 1500 ಪ್ರಕರಣಗಳು ಗುಣಮುಖವಾಗಿವೆ. ಕಾಲೇಜು ವಿದ್ಯಾರ್ಥಿಗಳಿಗೆ ಕರೊನಾ ಪರೀಕ್ಷೆ ನಡೆಸಲು ಸ್ವಾ್ಯಬ್ ಸಂಗ್ರಹಣೆಗೆ ವೈರಲ್ ಟ್ರಾನ್ಸ್​ಪೋರ್ಟ್ ಮೀಡಿಯಾ (ವಿಟಿಎಂ) ಕೊರತೆ ಎದುರಾಗಿದೆ. ಶಿರಸಿ ತಾಲೂಕಿಗೆ ಉಳಿದ ತಾಲೂಕಿಗಿಂತ ಹೆಚ್ಚು ವಿಟಿಎಂ ಪೂರೈಕೆ ಮಾಡಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ಮಧುಕರ ನಾಯ್ಕ ಮಾತನಾಡಿ, ಭತ್ತದ ಬೆಳೆ ಕಟಾವು ಪ್ರಾರಂಭವಾಗಿದೆ. ಕಳೆದ ಸಾಲಿನ ಭತ್ತದ ಬೆಳೆ ವಿಮೆ ಅಂಡಗಿ ಗ್ರಾಮ ಪಂಚಾಯಿತಿಗೆ ಶೇ.36, ಬದನಗೋಡ ಶೇ.23 ಹಾಗೂ ಸಾಲ್ಕಣಿ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ.32 ವಿಮೆ ಬಿಡುಗಡೆಯಾಗಿದೆ. ತಾಲೂಕಿನಲ್ಲಿ ಈ ಬಾರಿ ಶೇ.40ರಷ್ಟು ಅಧಿಕ ಮಳೆಯಾಗಿದೆ ಎಂದರು.

ಗ್ರಾಮೀಣ ಭಾಗದ ಪಡಿತರ ಅಂಗಡಿಗಳಲ್ಲಿ ಮೂಲಭೂತ ಸೌಲಭ್ಯಗಳು, ಬಯೋಮೆಟ್ರಿಕ್ ವ್ಯವಸ್ಥೆಯಿಲ್ಲ. ಆಹಾರ ಧಾನ್ಯ ಸಂಗ್ರಹಿಸಲು ಸುಸಜ್ಜಿತ ಕಟ್ಟಡವಿಲ್ಲ. ಸರ್ಕಾರ ಕನಿಷ್ಠ ಸೌಲಭ್ಯ ಒದಗಿಸಬೇಕು ಎಂದು ಉಪಾಧ್ಯಕ್ಷ ಚಂದ್ರು ದೇವಾಡಿಗ ಆಗ್ರಹಿಸಿದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಭಾನುಪ್ರಕಾಶ ಮಾಹಿತಿ ನೀಡಿ, ಮಳೆಗಾಲ ಹಾಗೂ ಕೋವಿಡ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಕಾಮಗಾರಿ ಆರಂಭಿಸಲಾಗುತ್ತಿದೆ. ರಸ್ತೆ ನಿರ್ವಹಣೆ ಕೆಲಸ ಕೂಡ ಪ್ರಾರಂಭವಾಗಿದೆ ಎಂದರು. ಶಿರಸಿ-ಕುಮಟಾ ರಸ್ತೆ ಯ ಬಹುಕಡೆ ಹೊಂಡಗಳು ನಿರ್ವಣವಾಗಿದ್ದು ಸಂಚಾರ ಸಮಸ್ಯೆಯಾಗುತ್ತಿದೆ. ಹೊಂಡ ತುಂಬುವ ಕೆಲಸ ಮಾಡಿ ಎಂದು ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಸೂಚಿಸಿದರು.

ಈ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ್ ಉಪಸ್ಥಿತರಿದ್ದರು.