ಪಾವಗಡ: ಬೆಲೆ ಕುಸಿತದ ಆತಂಕದಿಂದಾಗಿ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಹುಣಸೆ ಹಣ್ಣಿನ ಹುಳಿ ನಾಲಿಗೆಗೆ ತಾಗದಂತಾಗಿ ಸಾವಿರಾರು ರೈತರು ಕಂಗಾಲಾಗಿದ್ದಾರೆ.
ಪಾವಗಡ, ಮಧುಗಿರಿ, ಮಡಕಶಿರಾ ಸುತ್ತಮುತ್ತ ಬೆಳೆಯುವ ಹುಣಸೆಗೆ ವಿಶ್ವಮಟ್ಟದಲ್ಲಿ ಬೇಡಿಕೆ ಇದೆ. ಆದರೆ, ಈ ಬಾರಿ ಬೆಲೆ ಕುಸಿತದ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹಣ್ಣಾಗುವ ಮುನ್ನವೇ ಕೊಯ್ಲು ಆರಂಭಿಸಿದ್ದಾರೆ. ತಾಲೂಕಿನ ಬಹುತೇಕ ಕುಟುಂಬಗಳು ಹುಣಸೆ ನಂಬಿ ಬದುಕು ಕಟ್ಟಿಕೊಂಡಿವೆ, ತೋಟಗಾರಿಕೆ ಇಲಾಖೆಯಲ್ಲಿ ಈ ಬೆಳೆ ಉತ್ತೇಜಿಸುವ ಯಾವ ಕಾರ್ಯಕ್ರಮಗಳೂ ಜಾರಿಯಲ್ಲಿ ಇಲ್ಲ ಎನ್ನಲಾಗಿದೆ. ಸದ್ಯ ತೋಟಗಾರಿಕೆ ಇಲಾಖೆ ಮಾಹಿತಿಯಂತೆ ತಾಲೂಕಿನಲ್ಲಿ 724 ಹೆಕ್ಟೇರ್ ಪ್ರದೇಶದಲ್ಲಿ 1,264 ರೈತರು 1,710 ಮೆಟ್ರಿಕ್ ಟನ್ ಹುಣಸೆ ಬೆಳೆಯುತ್ತಿದ್ದಾರೆ. ಆದರೆ, ಈ ಮಾಹಿತಿ ವಾಸ್ತವಕ್ಕೆ ದೂರವಾಗಿದೆ.
ತೆರಿಗೆಯಿಂದ ಆಂಧ್ರಕ್ಕೆ ಹೆಚ್ಚಿನ ಆದಾಯ: ಪಾವಗಡ ತಾಲೂಕು ಒಂದರಲ್ಲೇ 10 ಸಾವಿರ ಮೆಟ್ರಿಕ್ ಟನ್ ಹುಣಸೆ ಉತ್ಪಾದನೆಯಾಗುತ್ತದೆ. ಆದರೂ ಪಾವಗಡ ಸುತ್ತಮುತ್ತ ಎಲ್ಲಿಯೂ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಆಂಧ್ರದ ಹಿಂದೂಪುರ ಎಪಿಎಂಸಿಯಲ್ಲಿ ಮಾರಾಟ ಮಾಡಬೇಕಾಗಿದೆ. ಪಾವಗಡದ ಹುಣಸೆಹಣ್ಣು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಕ್ಕೆ ರವಾನೆಯಾಗಿ, ಅಲ್ಲಿಂದ ವಿದೇಶಗಳಿಗೂ ರಫ್ತು ಆಗುತ್ತದೆ. ಈ ಪ್ರಕ್ರಿಯೆ ಪಾವಗಡ ಭಾಗದಲ್ಲೇ ನಡೆಯುವಂತಾದರೆ, ಸ್ಥಳೀಯರಿಗೂ ಉದ್ಯೋಗ ಸಿಗುತ್ತದೆ. ಜತೆಗೆ ಸರ್ಕಾರಕ್ಕೂ ಹೆಚ್ಚಿನ ಆದಾಯ ಬರುತ್ತದೆ. ಆದ್ದರಿಂದ, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ.
ಶೀತಲೀಕರಣ ಘಟಕ ಬೇಕು: ಪಾವಗಡ ತಾಲೂಕಿನಲ್ಲಿ ಸಾವಿರಾರು ಮೆಟ್ರಿಕ್ ಟನ್ ದಪ್ಪ ತೊಳೆ, ದಟ್ಟ ತಿರುಳು, ಗಾಢ ಹುಳಿ ಹುಣಸೆಹಣ್ಣು ಬೆಳೆಯಲಾಗುತ್ತದೆ. ವರ್ಷವಿಡೀ ಸಂಸ್ಕರಣೆ ಮಾಡಲು ಶೀತಲೀಕರಣ ಘಟಕದ ಅವಶ್ಯಕತೆ ಇದೆ. ತೋಟಗಾರಿಕೆ ಇಲಾಖೆ ಯಾವುದೋ ಕಾರ್ಯಕ್ರಮಗಳಿಗೆ ಕೋಟ್ಯಂತರ ರೂಪಾಯಿ ವ್ಯಯಿಸುತ್ತದೆ. ಆದರೆ, ಹುಣಸೆಗಾಗಿ ಶೀತಲೀಕರಣ ಘಟಕ ಸ್ಥಾಪಿಸುವುದನ್ನೇ ಮರೆತಿದೆ.
ಬೆಲೆ ಕುಸಿತದ ಆತಂಕವೇಕೆ? : ಗುಣಮಟ್ಟದ ಕರಿಪುಳಿ, ಹೂವು ಹಣ್ಣು ಹಾಗೂ ಬೋಟು (ಬೀಜ ಸಹಿತ ಹುಣಸೆ) ಎಂದು ವಿಂಗಡಿಸಲಾಗುತ್ತದೆ. ಪ್ರಸ್ತುತ ತುಮಕೂರು ಮಾರುಕಟ್ಟೆಯಲ್ಲಿ ಕರಿಪುಳಿ ಹುಣಸೆಹಣ್ಣು ಕ್ವಿಂಟಾಲ್‌ಗೆ 10ರಿಂದ 15 ಸಾವಿರ ರೂ. ದರವಿದೆ. ಹುಣಸೆಹಣ್ಣು ಮಾತ್ರವಲ್ಲದೆ ಹುಣಸೆಬೀಜಕ್ಕೂ 1500 ರೂ.ವರೆಗೆ ದರ ಇದೆ. ಹಿಂದೂಪುರದಲ್ಲಿ ಕರಿಪುಳಿ ಹಣ್ಣು ಕ್ವಿಂಟಾಲ್‌ಗೆ 15 ಸಾವಿರ ರೂ. ಬೆಲೆ ಹೊಂದಿದ್ದರೆ, ಹೂವುಹಣ್ಣು 3 ಸಾವಿರ ರೂ., ಹುಣಸೆಬೀಜ 3,500 ರೂ. ದರ ಹೊಂದಿವೆ. ಹಿಂದೂಪುರ ಶೀತಲೀಕರಣ ಘಟಕಗಳಲ್ಲೂ ಸಾಕಷ್ಟು ಹುಣಸೆ ದಾಸ್ತಾನು ಮಾಡಲಾಗುತ್ತದೆ. ಜತೆಗೆ ಈ ವರ್ಷ ಜಿಲ್ಲೆಯಲ್ಲಿ ಹೆಚ್ಚಿನ ಇಳುವರಿ ಬಂದಿರುವ ಕಾರಣ, ಹುಣಸೆ ಬೆಲೆ ಕುಸಿತದ ಆತಂಕ ಉಂಟಾಗಿದೆ.
ಸಾಗಣೆ ವೆಚ್ಚವೇ ದುಬಾರಿ: ಸಾವಿರಾರು ಮೆಟ್ರಿಕ್ ಟನ್ ಹುಣಸೆ ಬೆಳೆಯುವ ಪಾವಗಡ ಭಾಗದಲ್ಲಿ ಸೂಕ್ತ ಮಾರುಕಟ್ಟೆ ಅಗತ್ಯವಿದೆ. ಪ್ರಸ್ತುತ ಹಿಂದೂಪುರ ಮಾರುಕಟ್ಟೆಗೆ ಸರಕು ಸಾಗಾಣಿಕೆ ವೆಚ್ಚವೇ ಹೊರೆಯಾಗಿದೆ. ಅಲ್ಲಿನ ಎಪಿಎಂಸಿಗಳಲ್ಲಿ ಮಧ್ಯವರ್ತಿಗಳಿಗೆ ಶೇ.7 ಕಮಿಷನ್ ಕೊಡಬೇಕಾಗುತ್ತದೆ ಎಂದು ರೈತರು ಅಲವತ್ತುಕೊಂಡರು.
ಪಾವಗಡ ಭಾಗದಲ್ಲಿ ಬಹುತೇಕರು ಹುಣಸೆ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಆಗಬೇಕು. ಸಕಾಲದಲ್ಲಿ ಬೆಂಬಲ ಬೆಲೆ ೋಷಿಸಬೇಕು. ಶೀತಲೀಕರಣ ಘಟಕ ಸ್ಥಾಪಿಸಬೇಕು. ನರಸೇಗೌಡ, ಪಾವಗಡ ರೈತ ಪಾವಗಡದಲ್ಲಿ ಹುಣಸೆ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಇಲಾಖೆಯಿಂದ ಹುಣಸೆ ಬೆಳೆಗೆ ಯಾವುದೇ ಕಾರ್ಯಕ್ರಮಗಳಿಲ್ಲ. ಬಹುತೇಕ ರೈತರು ಹಿಂದೂಪುರ ಮಾರುಕಟ್ಟೆ ಅವಲಂಬಿಸಿದ್ದಾರೆ. ಶಿವಕುಮಾರ್, ಪಾವಗಡದ ಸಹಾಯಕ ತೋಟಗಾರಿಕಾ ನಿರ್ದೇಶಕ