ಹುಣಸೂರು: ನಾಲ್ಕು ತಿಂಗಳ ದೀರ್ಘ ಸಮಯದ ನಂತರ ಹುಣಸೂರು ಯೋಜನಾ ಪ್ರಾಧಿಕಾರದ ಸಭೆ ನಡೆದು ಬಾಕಿ ಇದ್ದ ಅರ್ಜಿಗಳ ವಿಲೇವಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಉಪವಿಭಾಗಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಕ್ರಮವಹಿಸಿದರು.
ಫೆ.3ರಂದು ವಿಜಯವಾಣಿ ಪತ್ರಿಕೆಯಲ್ಲಿ ನಾಲ್ಕು ತಿಂಗಳು ಕಳೆದರೂ ನಡೆಯದ ಸಭೆ ಎಂಬ ಶೀರ್ಷಿಕೆಯಡಿ ಹುಣಸೂರು ಯೋಜನಾ ಪ್ರಾಧಿಕಾರದಲ್ಲಿ ಆಗಿರುವ ಕಾರ್ಯಚಟುವಟಿಕೆಯ ವಿಳಂಬದಿಂದ ನಾಗರಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ವಿಶೇಷ ವರದಿ ಪ್ರಕಟಿಸಿತ್ತು. 25ಕ್ಕೂ ಹೆಚ್ಚು ಅರ್ಜಿಗಳು ವಸತಿ, ವಾಣಿಜ್ಯ ಮತ್ತು ಇತರ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾಗಿದ ಜಮೀನುಗಳ ಏಕ ನಿವೇಶನ ಮತ್ತು ಬಹುನಿವೇಶನ ಮತ್ತು ಈಗಾಗಲೇ ಈ ಹಿಂದೆ ಪ್ರಾಧಿಕಾರದಿಂದ ಅನುಮತಿ ಪಡೆದು ಅಭಿವೃದ್ಧಿಪಡಿಸಲಾದ ಅಂತಿಮ ವಿನ್ಯಾಸಕ್ಕೆ ಅನುಮೋದನೆಗಾಗಿ ಕಾಯುತ್ತಿದ್ದ ಕುರಿತು ಸವಿಸ್ತಾರವಾಗಿ ವರದಿ ಪ್ರಕಟಿಸಲಾಗಿತ್ತು. ವರದಿ ಪ್ರಕಟಗೊಂಡ ನಂತರ ಎಚ್ಚೆತ್ತ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಹ್ಯಾರಿಸ್ ಸುಮೇರ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಸಿದರು.
ಪ್ರಾಧಿಕಾರದ ಅಧ್ಯಕ್ಷ, ಹುಣಸೂರು ನಗರದ ಯೋಜನಾಬದ್ಧ ಅಭಿವೃದ್ಧಿಗಾಗಿ ಸೂಕ್ತ ಕ್ರಮವಹಿಸಲಾಗಿದೆ. ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಅಗತ್ಯ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಪ್ರಾಧಿಕಾರದ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಅಗತ್ಯ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಹುಣಸೂರು ಯೋಜನಾ ಪ್ರಾಧಿಕಾರ ಆರಂಭಗೊಂಡು ಈವರೆಗೆ ಪ್ರಾಧಿಕಾರದಿಂದ ಅನುಮೋದನೆಗೊಂಡ ವಸತಿ/ಬಡಾವಣೆಗಳಲ್ಲಿನ ನಾಗರಿಕ ಸೌಲಭ್ಯ ಜಾಗಗಳು ಪ್ರಾಧಿಕಾರದ ಮಾಲೀಕತ್ವದಲ್ಲಿದ್ದು, ಸದರಿ ಸೌಲಭ್ಯದ ಜಾಗಗಳಲ್ಲಿ ಪ್ರಾಧಿಕಾರದ ವತಿಯಿಂದ ನಾಮಫಲಕಗಳನ್ನು ಅಳವಡಿಸಲು ಸೂಚಿಸಲಾಗಿದೆ.
ಹುಣಸೂರು ನಗರದ ವೇಗವಾಗಿ ಬೆಳೆಯತ್ತಿದ್ದು, ಸಾಕಷ್ಟು ಸರ್ಕಾರಿ ಕಚೇರಿಗಳು ಸ್ವಂತ ಕಟ್ಟಡವನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿದ್ದು, ಯೋಜನಾ ಪ್ರಾಧಿಕಾರಕ್ಕೂ ಸ್ವಂತ ಕಟ್ಟಡದ ಅವಶ್ಯಕತೆಯಿದ್ದು, ಸೂಕ್ತ ಕ್ರಮವಹಿಸಲು ಅಧೀನ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ತಿಳಿಸಿದರು.
ಸಭೆಯಲ್ಲಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಹಾಯಕ ನಿರ್ದೇಶಕ ಎಚ್.ವಿ.ಶ್ರೀಧರ್, ನಗರಸಭೆ ಪ್ರಭಾರ ಪೌರಾಯುಕ್ತೆ ಶರ್ಮಿಳಾ, ಪ್ರಾಧಿಕಾರ ಸಮಿತಿ ಸದಸ್ಯ ಸ್ವಾಮಿಗೌಡ ಹಾಜರಿದ್ದರು.
ಇದೇ ವೇಳೆ ಪ್ರಾಧಿಕಾರ ಸಮಿತಿ ಅಧ್ಯಕ್ಷ ಮಹಮದ್ ಹ್ಯಾರಿಸ್ ಸುಮೇರ್ ಅವರು ಸಹಾಯಕ ನಿರ್ದೇಶಕ ಎಚ್.ವಿ.ಶ್ರೀಧರ್ ಜತೆಗೂಡಿ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.