ಜಿಲ್ಲೆ

ಕಡಿಮೆ ಬೆಲೆಗೆ ಬಂಗಾರ ಕೊಡಿಸ್ತೇನೆ ಅಂತ ದುಡ್ಡು ತಗೊಂಡು ಪರಾರಿಯಾದವ ಪೊಲೀಸ್ ಬಲೆಗೆ ಬಿದ್ದ!

ಮುಂಡರಗಿ: ಕಡಿಮೆ ಬೆಲೆಗೆ ಬಂಗಾರ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದ ಹೂವಿನ ಹಡಗಲಿ ತಾಲೂಕಿನ ಶಿವಪೂರದ ದುರಗಪ್ಪ ಭೀಮಪ್ಪ ಕೊರಚರನನ್ನು ಮುಂಡರಗಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಮಡಿಕೇರಿಯ ಬಾಲಕೃಷ್ಣ ರೈ ಎಂಬುವರಿಗೆ ದೂರವಾಣಿ ಕರೆ ಮಾಡಿದ ದುರಗಪ್ಪ, ‘ಹಿಂದೆ ನಾನು ಮಡಿಕೇರಿಯಲ್ಲಿ ಕೆಲಸ ಮಾಡಿದ್ದೆ, ನನಗೆ ನಿಮ್ಮ ಪರಿಚಯವಿದೆ. ನಿಮ್ಮ ಭಾವನ ಮಗನ ಮದುವೆಗೆ ನಾವು ಕಡಿಮೆ ಹಣದಲ್ಲಿ ಬಂಗಾರ ಕೊಡಿಸುತ್ತೇವೆ. ನೀವು 15ಲಕ್ಷ ರೂ. ತಗೆದುಕೊಂಡು ಬನ್ನಿ’ ಎಂದು ತಿಳಿಸಿದ್ದನು.

ಇದನ್ನು ನಂಬಿದ ಮಡಿಕೇರಿಯ ಬಾಲಕೃಷ್ಣ, ಭಾವ ಬಿ.ಕೆ. ನಾರಾಯಣ ಅವರೊಂದಿಗೆ ಆ.11ರಂದು ಮುಂಡರಗಿ ಪಟ್ಟಣಕ್ಕೆ ಬಂದಿದ್ದರು. ದುರಗಪ್ಪ ಅವರಿಗೆ ಕರೆ ಮಾಡಿ ತಾಲೂಕಿನ ಬೆಣ್ಣಿಹಳ್ಳಿ ಬಳಿ ಬರುವಂತೆ ತಿಳಿಸಿದ್ದ. ಬಾಲಕೃಷ್ಣ ಅವರು ಅಲ್ಲಿಗೆ ಹೋದಾಗ, ಸಮೀಪದಲ್ಲಿರುವ ಬೆಣ್ಣಿಹಳ್ಳಿ ಗ್ರಾಮಕ್ಕೆ ಹೋಗಿ ಬಂಗಾರ ತರುವುದಾಗಿ ಹೇಳಿ 15ಲಕ್ಷ ರೂ. ಹಣ ಪಡೆದು ಪರಾರಿಯಾಗಿದ್ದ. ಈ ಕುರಿತು ಮಡಿಕೇರಿಯ ಬಾಲಕೃಷ್ಣ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು 10ಲಕ್ಷ ರೂ. ಸಮೇತ ದುರಗಪ್ಪ ಕೊರಚರನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.