ಜಿಲ್ಲೆ

ಹಣದಾಸೆಗೆ ನಗರಸಭೆ ನವೀಕರಣ

ಕೊಪ್ಪಳ: ನಗರದ ಎಲ್ಲ ವಾರ್ಡ್‌ಗಳಲ್ಲಿ ಮೂಲ ಸೌಕರ್ಯ ಕೊರತೆ ಇದೆ. ಆದರೆ, ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಕೋಟ್ಯಂತರ ರೂ. ಹಣ ವ್ಯಯಿಸಿ ಕಚೇರಿ ನವೀಕರಣ ಮಾಡುತ್ತಿದ್ದಾರೆ ಎಂದು 16ನೇ ವಾರ್ಡ್ ಸದಸ್ಯ ಸೋಮಣ್ಣ ಹಳ್ಳಿ ಆರೋಪಿಸಿದರು.


ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.


ನಗರದ 31 ವಾರ್ಡ್‌ಗಳಲ್ಲಿ ಜನರಿಗೆ ಮೂಲ ಸೌಕರ್ಯಗಳಿಲ್ಲ. ರಸ್ತೆ ಹಾಳಾಗಿವೆ. ಸಾರ್ವಜನಿಕ ಶೌಚಗೃಹಗಳಿಲ್ಲ. ಚರಂಡಿಗಳು ಗಬ್ಬು ನಾರುತ್ತಿವೆ. ಅವುಗಳನ್ನು ಕಲ್ಪಿಸಬೇಕಿದೆ. ಆದರೆ, ನಗರಸಭೆ ಕಚೇರಿ ನವೀಕರಣ ಹೆಸರಿನಲ್ಲಿ 2.5 ಕೋಟಿ ರೂ. ಹಣ ಖರ್ಚು ಮಾಡುತ್ತಿದ್ದಾರೆ. ಅಷ್ಟು ಮೊತ್ತಕ್ಕೆ ಒಂದೇ ಬಾರಿಗೆ ಟೆಂಡರ್ ಕರೆದಿಲ್ಲ. ಬದಲಿಗೆ 50 ಲಕ್ಷ ರೂ.ದಂತೆ ನಾಲ್ಕೈದು ಟೆಂಡರ್ ಮಾಡಿ ಹಣ ಎತ್ತಲು ಸಂಚು ರೂಪಿಸಿದ್ದಾರೆ. ಸಾಮಾನ್ಯ ಸಭೆಯಲ್ಲಿ ಸಣ್ಣ ಪುಟ್ಟ ರಿಪೇರಿ ಸೇರಿ 30 ಲಕ್ಷ ರೂ. ಮೊತ್ತದಲ್ಲಿ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ಚರ್ಚಿಸಲಾಗಿದೆ. ಅದೇ ವಿಷಯ ಇಟ್ಟುಕೊಂಡು ಈಗ ಕೋಟ್ಯಂತರ ರೂ. ಕಾಮಗಾರಿ ಮಾಡುತ್ತಿದ್ದಾರೆಂದು ಆರೋಪಿಸಿದರು.


ಈ ಸಂಬಂಧ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಕೇಳಿದ ಮಾಹಿತಿ ನೀಡಿಲ್ಲ. ಮೇಲಧಿಕಾರಿಗಳು ಕಾಮಗರಿ ಸ್ಥಗಿತಗೊಳಿಸಲು ಸೂಚಿಸಿದರೂ ಮುಂದುವರೆಸಿದ್ದಾರೆ. ತಕ್ಷಣ ಕಾಮಗಾರಿ ನಿಲ್ಲಿಸಬೇಕು. ಜನರಿಗೆ ಅನುಕೂಲವಾಗುವ ಕೆಲಸ ಮಾಡಬೇಕು. ಅಧ್ಯಕ್ಷೆ ಹಾಗೂ ಸದಸ್ಯ ಮಹೇಂದ್ರ ಚೋಪ್ರಾ ನವೀಕರಣ ಕಾಮಗಾರಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಉಳಿದ ಸದಸ್ಯರು ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲವೆಂದು ನನಗೆ ಗೊತ್ತಿಲ್ಲ. ನಮ್ಮ ಪಕ್ಷದವರೂ ಸುಮ್ಮನಾಗಿದ್ದಾರೆ. ತಕ್ಷಣ ಕಾಮಗಾರಿ ನಿಲ್ಲಿಸಬೇಕು. ಇಲ್ಲದಿದ್ದರೆ ಪೌರಾಡಳಿತ ಸಚಿವರಿಗೆ ಪತ್ರ ಬರೆದು ದೂರು ಸಲ್ಲಿಸುವೆ ಮುಂದಿನ ನಡೆ ತಿಳಿಸಿದರು. ರಮೇಶ ಬೂದಗುಂಪಾ ಇದ್ದರು.