ಚಿತ್ರದುರ್ಗ:
ಹಣ ಹೊಂದಿಸುವ ಚಿಂತೆ ನಮಗೆ ಇಲ್ಲ, 40 ಪರ್ಸೆಂಟ್ ಸರ್ಕಾರದಲ್ಲಿ ಬಿಜೆಪಿಯವರಿಗೆ ಅಂತಹ ಸಮಸ್ಯೆ ಇತ್ತು ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಮುರುಘಾ ಮಠಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಗ್ಯಾರಂಟಿಗಳಿಂದಾಗಿ ಕಾಂಗ್ರೆಸ್ಸಿನ ಮಂತ್ರಿಗಳಿಗೆ ತಮ್ಮ ಖಾತೆಗಳ ಬಗ್ಗೆ ಮಾತನಾಡಲು ಆಗುತ್ತಿಲ್ಲವೆಂಬ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ನಾರಾಯಣಸ್ವಾಮಿ ಅವರಿಗೆ ಸಂಪುಟ ಸಭೆಯ ಬಗ್ಗೆ ಪರಿಜ್ಞಾನ ಇಲ್ಲವೇ ಎಂದು ಪ್ರಶ್ನಿಸಿದರು.
ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರಿಗೆ ಮಾತನಾಡಲು ಏನೂ ಉಳಿದಿಲ್ಲ. ಕೆಟ್ಟ ಆಡಳಿತದಿಂದಾಗಿ ಜನ ಅವರನ್ನು ಮನೆಗೆ ಕಳುಹಿಸಿದ್ದಾರೆ. ಉಚಿತ ವಿದ್ಯುತ್ ಯೋಜನೆ ದುರ್ಬಳಕೆ ತಡೆಯಲು ಸರಾಸರಿ ಬಳಕೆಯ ಲೆಕ್ಕ ಹಾಕಲಾಗಿದೆ. ಎಲ್ಲ ವರ್ಗದ ಮಹಿಳೆಯರು ರಾಜ್ಯದಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದರು.
ಜನಸಾಮಾನ್ಯರು ಸಂಚರಿಸುವ ಬಸ್‌ಗಳು ಡಕೋಟಾ ಎಂದಾದರೆ, ಇವರ ಅಧಿಕಾರಾವಧಿಯಲ್ಲಿದ್ದ ಬಸ್‌ಗಳು ಎಂತಹವಾಗಿದ್ದವು ಎಂದು ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.
ಪ್ರಣಾಳಿಕೆಯಲ್ಲಿ ಹೇಳಿರುವಂತೆ ಯುವನಿಧಿ ಯೋಜನೆ ಜಾರಿಯಾಗಿದೆ. ಉದ್ಯೋಗ ದೊರೆತ ಮೇಲೆ ನಿರುದ್ಯೋಗ ಭತ್ಯೆಯನ್ನು ಬಿಟ್ಟು ಕೊಡಬೇಕಾಗುತ್ತದೆ. ಸರ್ಕಾರದ ಹಣವನ್ನು ದಾನ, ಧರ್ಮ ಮಾಡಬೇಕು ಎಂದಿಲ್ಲ. ವಿತ್ತೀಯ ಜ್ಞಾನ, ಶಿಸ್ತಿನ ಸಿಎಂ ಸಿದ್ದರಾಮಯ್ಯ ಅವರು ಧೈರ್ಯದಿಂದ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದಾರೆ ಎಂದರು.
ಭಿಕ್ಷಾಟನೆ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ಭರವಸೆಗಳನ್ನು ಟೀಕಿಸಿದ್ದ ನೀವು ತಮ್ಮ ಪ್ರಣಾಳಿಕೆಯಲ್ಲಿ ಏನು ಹೇಳಿದ್ದೀರಿ ಎಂದು ಬಿಜೆಪಿಯನ್ನು ಪ್ರಶ್ನಿಸಿದರು.
ಶ್ರೀಗಳಿಂದ ಗೌರವ
ಮುರುಘಾ ಮಠಕ್ಕೆ ಆಗಮಿಸಿದ ಸಚಿವ ಎಂ.ಬಿ.ಪಾಟೀಲ್, ಕರ್ತೃ ಗದ್ದುಗೆ ದರ್ಶನ ಪಡೆದ ಬಳಿಕ ಶ್ರೀ ಬಸವಪ್ರಭು ಸ್ವಾಮೀಜಿ ಅವರಿಂದ ಗೌರವ ಸ್ವೀಕರಿಸಿದರು. ಶಾಸಕ ಕೆ.ಸಿ.ವೀರೇಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್‌ಪೀರ್, ಎಸ್‌ಎಂಎಲ್ ತಿಪ್ಪೇಸ್ವಾಮಿ, ಎಚ್.ಆನಂದಪ್ಪ, ಡಿವಿಎಸ್ ಪ್ರದೀಪ್ ಮತ್ತಿತರರು ಇದ್ದರು.