ಜಿಲ್ಲೆ

ಹಣ ಹಂಚಿಕೆ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮವಾಗಲಿ

ಹಾಸನ: ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದು ತಾಲೂಕಿಗೆ 7 ಕೋಟಿ ರೂ. ಹಂಚಿಕೆಯಾಗಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿಕೆ ಆಧರಿಸಿ ಹೇಳುವುದಾದರೆ ಜಿಲ್ಲೆಯ ಎಲ್ಲ ತಾಲೂಕು ಸೇರಿ ಮತದಾರರಿಗೆ ಒಟ್ಟು 56 ಕೋಟಿ ರೂಪಾಯಿಗಳ ಹಣ ಹಂಚಿಕೆಯಾಗಿದೆ. ಹೀಗಾಗಿ ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ಅವರನ್ನು ಪ್ರಜಾಪ್ರತಿನಿಧಿ ಕಾಯ್ದೆಯಡಿ ಸಂಸದ ಸ್ಥಾನದಿಂದ ಅನರ್ಹಗೊಳಿಸುವಂತೆ ಬಿಜೆಪಿ ಮುಖಂಡ ಹಾಗೂ ವಕೀಲ ಜಿ. ದೇವರಾಜೇಗೌಡ ಆಗ್ರಹಿಸಿದರು.

ಹಣ ಹಂಚಿಕೆ ಬಗ್ಗೆ ಶಾಸಕರಾದ ಶಿವಲಿಂಗೇಗೌಡ ಅವರೇ ಮಾತನಾಡಿರುವ ಸಂಭಾಷಣೆಯ ಧ್ವನಿಸುರಳಿ ವೈರಲ್ ಆಗಿದೆ. ಇವರನ್ನು ಸಹ ಪ್ರಜಾಪ್ರತಿನಿಧಿ ಖಾಯ್ದೆ 1951 ಕಲಂ 123 ಮತ್ತು 77 ರ ಅಡಿಯಲ್ಲಿ ಅನರ್ಹಗೊಳಿಸಬೇಕು. ಹಾಗೂ ಹಣ ಹಂಚಿಕೆಯಲ್ಲಿ ಭಾಗಿಯಾಗಿರುವ ಎಲ್ಲ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಾನೂನು ರಿತ್ಯಾ ಕ್ರಮ ಕೈಗೊಳ್ಳುವ ಬಗ್ಗೆ ದೂರು ಅರ್ಜಿಯನ್ನು ಜಿಲ್ಲಾಧಿಕಾರಿಗೆ ಕೊಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ರಾಜ್ಯಸಭಾ ಸದಸ್ಯ ಎನ್. ಚಂದ್ರಶೇಖರ ಅವರು ಪ್ರಜೆಗಳಿಂದ ಆಯ್ಕೆಯಾಗಿದ್ದು ಇವರು ಸ್ಪಷ್ಟವಾಗಿ ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆ ಮಾಡಿ ಮತದಾರರಿಗೆ ಹಣ ಹಂಚಿಕೆ ಮಾಡಲು ಸೂಚನೆ ನೀಡಿರುವುದು ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆಯಾಗಿರುತ್ತದೆ ಹಾಗೂ ಎರಡು ಖಾಸಗಿ ಹೋಟೆಲ್‌ನಲ್ಲಿ ನಡೆದಿರುವ ಹಣ ವಿನಿಮಯ ಸಂಬಂಧ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ಅಕ್ರಮದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.