ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಇರುವ ಜಿಲ್ಲಾ ಜವಳಿ ಮತ್ತು ಕೈಮಗ್ಗ ಇಲಾಖೆ ಕಚೇರಿ. 
ಜಿಲ್ಲೆ

ಹಣ ವರ್ಗಾವಣೆ ಹಗರಣ ಸಿಐಡಿಗೆ ವಹಿಸಲು ಚಿಂತನೆ !

ಅಶೋಕ ಶೆಟ್ಟರ, ಬಾಗಲಕೋಟೆ:
ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಜಿಲ್ಲಾಧಿಕಾರಿ ಹೆಸರಿನಲ್ಲಿ ಐಡಿಬಿಐ ಬ್ಯಾಂಕ್ ನಲ್ಲಿ ಇರುವ ಮೂರು ಖಾತೆಗಳಿಂದ ೨.೪೭ ಲಕ್ಷ ರೂ. ಹಣ ಗುಳಂ ಆಗಿರುವ ಪ್ರಕರಣದ ಬೆನ್ನತ್ತಿರುವ ಸಿಇಎನ್ ತನಿಖಾ ತಂಡಕ್ಕೆ ಅಚ್ಚರಿಯ ಮೇಲೊಂದು ಅಚ್ಚರಿಯ ಬೆಳವಣಿಗೆಗಳು ಕಂಡು ಬರುತ್ತಿವೆ...!!

ದಿನಕ್ಕೊಂದು ಇಲಾಖೆಗಳ ಹೆಸರು ಬೆಳಕಿಗೆ ಬರುತ್ತಿರುವುದರಿಂದ ಇದರ ಆಳ, ಅಗಲ ಬಹು ವಿಸ್ತಾರ ಆಗುತ್ತಿದ್ದು, ಇದು ೩ ಕೋಟಿ ರೂ.ಗಳಿಗೂ ಅಽಕ ಮೊತ್ತದ ಅವ್ಯವಹಾರ ಕಂಡು ಬರುತ್ತಿದ್ದು, ಇಡೀ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವುದು ಒಳಿತು ಎನ್ನುವ ಸಲಹೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಇದೀಗ ಜಿಲ್ಲಾ ಪೊಲೀಸ್ ಇಲಾಖೆಯೂ ಸಹ ಅದೇ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಪ್ರವಾಸೋದ್ಯಮ ಇಲಾಖೆಯ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಇಲಾಖೆ ಡಿಡಿ ದಾಖಲಿಸಿದ್ದ ಪ್ರಕರಣದ ಬೆನ್ನು ಹತ್ತಿದಾಗ ಇದು ಬರೀ ಒಂದು ಇಲಾಖೆಗೆ ಸಂಬಂಧಿಸಿದ್ದಲ್ಲ, ಹೀಗೆ ಆರೇಳು ಇಲಾಖೆಯ ಹಣವನ್ನು ಬ್ಯಾಂಕಿನ ಸಿಬ್ಬಂದಿ ಬೇರೆ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡಿ ಗುಳಂ ಮಾಡಿರುವುದನ್ನು ದಾಖಲೆಗಳು ಹೇಳುತ್ತಿವೆಯಂತೆ.

ವಿಚಿತ್ರವೆಂದರೆ ಇದೀಗ ಪ್ರವಾಸೋದ್ಯಮ ಇಲಾಖೆ ಹಲವು ವರ್ಷಗಳಿಂದ ಹಣಕಾಸು ಲೆಕ್ಕವನ್ನೆ ಇಟ್ಟಿಲ್ಲ, ವಾರ್ಷಿಕ ಲೆಕ್ಕತಪಾಸಣೆ ಮಾಡಿಸಿಲ್ಲ. ಅದೇ ರೀತಿ ಇದೀಗ ಜವಳಿ ಮತ್ತು ಕೈಮಗ್ಗ ಇಲಾಖೆ ಹಾಗೂ ಹಿಂದುಳಿದ ವರ್ಗದ ಇಲಾಖೆಯ ಹಣಕ್ಕೂ ಕುತ್ತು ಎಂದು ತಿಳಿದು ಬಂದಿದೆ. ಇಷ್ಟೇ ಅಲ್ಲದೇ ಈ ಮೂರು ಇಲಾಖೆಗಳಷ್ಟೆ ಅಲ್ಲದೇ ಇನ್ನೂ ಮರ‍್ನಾಲ್ಕು ಇಲಾಖೆಗಳ ಹೆಸರು ತಳಕು ಹಾಕಿಕೊಳ್ಳಲಿದೆ. ಹಾಗೆಯೇ ಕೆಲವರ ವೈಯಕ್ತಿಕವಾಗಿಯೂ ಹಣವೂ ಹೋಗಿದೆ ಎನ್ನುವ ಮಾಹಿತಿ ಇದೆ. ಹೀಗಾಗಿ ಪ್ರಕರಣದ ವ್ಯಾಪ್ತಿ ಹಿಗ್ಗುತ್ತಿದ್ದು, ಈ ಎಲ್ಲ ಇಲಾಖೆಗಳಿಗೆ ಸಂಬಂಧಿಸಿದಂತೆ ತನಿಖೆಯನ್ನು ಸಿಐಡಿಗೆ ವಹಿಸುವುದು ಬಹುತೇಕ ಖಚಿತ ಎಂದು ಗೊತ್ತಾಗಿದೆ.

ಪ್ರವಾಸೋದ್ಯಮ ಇಲಾಖೆ ಮಾತ್ರವಲ್ಲದೇ ಉಳಿದ ಕೆಲ ಇಲಾಖೆಗಳು ಸಹ ಪ್ರತಿ ವರ್ಷ ಲೆಕ್ಕಪರಿಶೋಧನೆ ಮಾಡಿಸುವ ಗೋಜಿಗೆ ಹೋಗಿಲ್ಲ. ಇಲ್ಲಿ ಬರೀ ಇಲಾಖೆ ಮುಖ್ಯಸ್ಥರಷ್ಟೆ ಅಲ್ಲದೇ ಜಿಲ್ಲಾಧಿಕಾರಿ ಹೆಸರಿನಲ್ಲಿ ಇರುವ ಖಾತೆಗಳಿಂದಲೂ ಹಣವನ್ನು ಲೂಟಿ ಹೊಡೆಯಲಾಗಿದೆ. ಹೀಗಾಗಿ ಅವರದ್ದು ಇಲ್ಲಿ ಬೇಜವಾಬ್ದಾರಿ ಕಂಡು ಬರುತ್ತಿದೆ. ಇಲಾಖೆಯ ಹಣಕಾಸಿನ ವಹಿವಾಟಿನ ಅಡಿಟ್ ಮಾಡಿಸಿಲ್ಲವೆಂದರೂ ಜಿಲ್ಲಾಧಿಕಾರಿಗಳು ಏಕೆ ಮೌನ ವಹಿಸಿದರು? ೨೦೨೧ ರಿಂದ ೨೦೨೪ ರ ಫೆಬ್ರುವರಿ ವರೆಗೂ ನಡೆದಿರುವ ಈ ಹಣ ವರ್ಗಾವಣೆ ಅವಧಿಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಆಯಾ ಇಲಾಖೆಗಳ ಮುಖ್ಯಸ್ಥರು ಯಾರಿದ್ದರು ಹಾಗೂ ಬ್ಯಾಂಕ್ ಖಾತೆಗಳು ಯಾರ ಹೆಸರಿನಲ್ಲಿ ಇವೆ. ಅನೇಕ ಇಲಾಖೆಗಳು ಐಡಿಬಿಐ ಬ್ಯಾಂಕಿನಲ್ಲೆ ಖಾತೆ ತೆರೆದಿದ್ದೇಕೆ? ಖಾತೆಯ ವಹಿವಾಟಿನ ಬಗ್ಗೆ ನಿಗಾ ವಹಿಸಿಲ್ಲವೇಕೆ? ಹೀಗಾಗಿ ಇಲಾಖೆ ಕಡೆಗೂ ಅನುಮಾನದ ಹುತ್ತ ಬೆಳೆಯುತ್ತಲೇ ಇದೆ. ಹೀಗಾಗಿ ಪ್ರಕರಣವನನು ಸಿಐಡಿಗೆ ವಹಿಸುವುದು ಅಗತ್ಯ. ಅಲ್ಲದೇ ೩ ಕೋಟಿ ರೂ.ಗೂ ಅಧಿಕ ಅಕ್ರಮ ಆಗಿದ್ದರಿಂದ ಈ ಪ್ರಕರಣ ಸಿಐಡಿಗೆ ಹೋಗುತ್ತದೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ಮತ್ತೊಬ್ಬ ಬ್ಯಾಂಕ್ ಅಧಿಕಾರಿ ವಿಚಾರಣೆ :
ಪ್ರವಾಸೋದ್ಯಮ ಇಲಾಖೆ ಹಣ ವರ್ಗಾವಣೆ ವಿಚಾರವಾಗಿ ಈಗಾಗಲೇ ಬ್ಯಾಂಕಿನ ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ ಹಣ ವರ್ಗಾವಣೆ ಮಾಡಿಸಿಕೊಂಡಿದ್ದ ೬ ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ರೋಹಿತ್ ಎನ್ನುವವರನ್ನು ಧಾರವಾಡದಲ್ಲಿ ವಶಕ್ಕೆ ಪಡೆದುಕೊಂಡಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾದ ಕೆಲ ಬ್ಯಾಂಕ್ ಸಿಬ್ಬಂದಿ ತಲೆ ಮರೆಸಿಕೊಂಡಿದ್ದಾರೆ. ಓರಿಸ್ಸಾ ಮತ್ತು ಕೇರಳದಲ್ಲಿ ಇರಬಹುದು ಎನ್ನುವ ಸಂಶಯ ಇರುವುದರಿಂದ ಆ ಎರಡು ರಾಜ್ಯಗಳಿಗೂ ಪೊಲೀಸರ ತಂಡ ಅವರನ್ನು ಪತ್ತೆ ಮಾಡಲು ತೆರಳಿದೆ. ಅಂದಾಜು ೯ ಜನ ಬ್ಯಾಂಕ್ ಸಿಬ್ಬಂದಿ ಇರಬಹುದು ಎನ್ನಲಾಗುತ್ತಿದ್ದು, ಅನೇಕ ಹೊರಗಿನ ವ್ಯಕ್ತಿಗಳು ತಮ್ಮ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡಿರುವ ಆರೋಪದ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ಏತನ್ಮಧ್ಯ ಅಕ್ರಮವ ಘಾಟು ಬೇರೆ ಬೇರೆ ಇಲಾಖೆಗಳಿಗೆ ವ್ಯಾಪಿಸಿ, ಪ್ರವಾಸೋದ್ಯಮ ಇಲಾಖೆಯ ೨.೪೭ ಕೋಟಿ ರೂ. ಜೊತೆಗೆ ಇನ್ನೂ ಹೆಚ್ಚಿನ ಹಣದ ಅಕ್ರಮ ನಡೆದಿರುವುದರಿಂದ ಸಿಐಡಿ ತನಿಖೆಗೆ ಈ ಪ್ರಕರಣ ಹೋಗಲಿದೆ.

ಈಗಾಗಲೇ ಕೆರೂರ ಹಾಗೂ ನೀಲಗುಂದ ಕೆವಿಜಿ ಬ್ಯಾಂಕ್ ಶಾಖೆಗಳಲ್ಲಿ ರೈತರ ಹೆಸರಿನಲ್ಲಿ ಹಣ ಗುಳಂ ಮಾಡಿರುವ ಪ್ರಕರಣ ಒಂದು ಸಿಐಡಿಗೆ ಹೋಗಿದ್ದು, ಇನ್ನೂಂದು ಶಾಖೆಯ ತನಿಖೆಯನ್ನು ಸಿಐಡಿಗೆ ವಹಿಸಲಾಗುತ್ತಿದೆ. ಇದೀಗ ಪ್ರವಾಸೋದ್ಯಮದ ಜೊತೆಗೆ ಇರತೆ ಇಲಾಖೆಗಳ ಅಕ್ರಮ ಹಣ ವರ್ಗಾವಣೆ ಪ್ರಕರಣವೂ ಸಿಐಡಿಗೆ ಹೋಗುವುದು ಬಹುತೇಕ ಖಚಿತವಾಗಿದೆ.