ಜಿಲ್ಲೆ

ಹಣ ಲೂಟಿ ಮಾಡಲು ಕುಂಭಮೇಳ ಆಯೋಜನೆ

ಕೆ.ಆರ್.ಪೇಟೆ: ಸ್ವಾರ್ಥಕ್ಕಾಗಿ ಅಧಿಕಾರ ಬಳಸಿಕೊಂಡು ಧಾರ್ಮಿಕ ಆಚರಣೆ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಕೊಳ್ಳೆ ಹೊಡೆಯಲು ಮಹಾಕುಂಭ ಮೇಳ ಆಯೋಜಿಸಲಾಗಿತ್ತು ಎಂದು ಸಚಿವ ಕೆ.ಸಿ.ನಾರಾಯಣಗೌಡ, ಜಿಲ್ಲಾಡಳಿತದ ವಿರುದ್ಧ ಜೆಡಿಎಸ್ ಮುಖಂಡ ಹಾಗೂ ಮನ್ಮುಲ್ ನಿರ್ದೇಶಕ ಎಚ್.ಟಿ.ಮಂಜು ಆರೋಪಿಸಿದರು.


ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂಭಮೇಳದ ಹೆಸರಿನಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಸೇರಿದಂತೆ ಅಧಿಕಾರಿಗಳು ಸಾಕಷ್ಟು ಪ್ರಮಾಣದ ಹಣ ವಸೂಲಿ ಮಾಡಿದ್ದಾರೆ. ಸಚಿವರು ಒಂದು ಪಕ್ಷದ ಕಾರ್ಯಕ್ರಮದಂತೆ ತಮ್ಮ ಸ್ವಾರ್ಥಕ್ಕಾಗಿ ಹಣ ಕೊಳ್ಳೆ ಹೊಡೆಯಲು ಕುಂಭಮೇಳ ನಡೆಸಿದ್ದಾರೆ. ಒಂದು ತಿಂಗಳಿಂದ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ನಿಷ್ಕ್ರಿಯಗೊಂಡು ಸಾರ್ವಜನಿಕರ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ದೂರದ ಗ್ರಾಮಗಳಿಂದ ತಾಲೂಕು ಕಚೇರಿ, ಸರ್ವೇ ಸೇರಿದಂತೆ ಇತರ ಇಲಾಖೆಗಳಿಗೆ ರೈತರು ಅಲೆಯುವಂತಾಗಿದೆ. ಎಲ್ಲ ಇಲಾಖೆ ಅಧಿಕಾರಿಗಳು ಕಚೇರಿ ಕೆಲಸ ಮಾಡದೆ ಕುಂಭಮೇಳದ ಕೆಲಸ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ ಎಂದು ಆರೋಪಿಸಿದರು.


ಮಲೆಮಹದೇಶ್ವರ ಸ್ವಾಮಿ ಪ್ರಸಾದವನ್ನು ಅನ್ನಸಂತರ್ಪಣೆ ಹೆಸರಿನಲ್ಲಿ ವಿತರಿಸಿ ಹೆಸರು ತೆಗೆದುಕೊಳ್ಳಲು ಹೊರಟಿದ್ದೀರಿ. ಆದರೆ, ಊಟ ಮಾಡುವ ವೇಳೆ ಕರ್ತವ್ಯನಿರತ ಆರಕ್ಷಕ ಸಿಬ್ಬಂದಿಗೆ ನಿಕೃಷ್ಟ್ಟವಾಗಿ ಮಾತನಾಡಿರುವ ನೀವು, ಅವರು ಪ್ರತ್ಯೇಕ ಅಡುಗೆ ಮಾಡಿಕೊಂಡು ಊಟ ಮಾಡುವಂತೆ ಮಾಡಿದ್ದೀರಿ ಎಂದು ಕಿಡಿಕಾರಿದರು.
ಪಟ್ಟಣದ ಎಲ್ಲ ಬಡಾವಣೆಗಳಲ್ಲಿಯೂ ಯುಜಿಡಿ ರಸ್ತೆಗೆ ನೀರು ಹರಿದು ವಾಸನೆ ಬರುತ್ತಿದೆ. ಸರ್ಕಾರಿ ಬಸ್ ನಿಲ್ದಾಣ ಮಳೆ ಬಂದಾಗಲೆಲ್ಲಾ ಕೆರೆಯಂತಾಗುತ್ತಿದೆ. ಎರಡೂವರೆ ವಷರ್ದಿಂದ ಸರಿಪಡಿಸಲು ಸಾಧ್ಯವಾಗಿಲ್ಲ. ಕುಂಭಮೇಳದ ಮೇಲೆ ಇರುವ ಆಸಕ್ತಿ ಪಟ್ಟಣದ ಅಭಿವೃದ್ಧಿಗೆ ಇಲ್ಲ. ಹಲವು ಖಾತೆಗಳನ್ನು ಹೊಂದಿದ್ದ ನೀವು ಅಭಿವೃದ್ಧಿ ಮಾಡದೆ ತಾಲೂಕನ್ನು ಹಿಂದುಳಿಯುವಂತೆ ಮಾಡಿದ್ದೀರಿ ಎಂದು ಆರೋಪಿಸಿದರು.


10 ಲಕ್ಷ ರೂ. ಪರಿಹಾರ ಕೊಡಿ:
ಕುಂಭಮೇಳಕ್ಕೆ ಆಗಮಿಸಿದ್ದ ತಾಲೂಕಿನ ಹರಿಹರಪುರದ ವೆಂಕಟಾಚಲ ಎಂಬುವರಿಗೆ ಹೃದಯಾಘಾತವಾಗಿತ್ತು. ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತು ಎಂದು ಸಾರ್ವಜನಿಕರೇ ಹೇಳಿದ್ದಾರೆ. ಕುಂಭಮೇಳ ನೋಡಿ ಮನೆಗೆ ತೆರಳುತ್ತಿದ್ದ ಸಾಕ್ಷಿಬೀಡು ಗ್ರಾಮದ ಸುಶೀಲಮ್ಮ ಎಂಬುವರು ಬಸ್ ಹರಿದು ಮೃತಪಟ್ಟಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಸಚಿವರು ಕುಟುಂಬಕ್ಕೆ ತಲಾ 10 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕಿರಾಮು, ತಾಪಂ ಮಾಜಿ ಸದಸ್ಯ ಮೋಹನ್, ಸಂತೆಬಾಚಹಳ್ಳಿ ಹೋಬಳಿ ಜೆಡಿಎಸ್ ಘಟಕದ ಅಧ್ಯಕ್ಷ ರವಿ, ಮುಖಂಡ ಅಗ್ರಹಾರ ಬಾಚಹಳ್ಳಿ ನಾಗೇಶ್ ಹಾಜರಿದ್ದರು.