ಜಿಲ್ಲೆ

ಹಣ ಪಡೆಯಲು ಮುಗಿಬಿದ್ದ ಜನ

ಅಕ್ಕಿಆಲೂರ: ಕೇಂದ್ರ ಸರ್ಕಾರ ಜನಧನ್ ಖಾತೆಗೆ ಹಾಕಿರುವ 500 ರೂ. ಗಳನ್ನು ಸರ್ಕಾರ ವಾಪಸು ಪಡೆಯುತ್ತಿದೆ ಎಂಬ ಸುಳ್ಳು ಸುದ್ದಿ ಹರಡಿರುವ ಹಿನ್ನೆಲೆಯಲ್ಲಿ ಬುಧವಾರ ಸ್ಥಳೀಯ ಕೆನರಾ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ಗಳಿಗೆ ಖಾತೆದಾರರು ಮುಗಿ ಬಿದ್ದರು.

ಲಾಕ್​ಡೌನ್ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜನಧನ್ ಖಾತೆಗೆ 500 ರೂ. ಹಾಕಿದೆ. ಹಣವನ್ನು ಬ್ಯಾಂಕ್​ಗಳಿಂದ ತೆಗೆದುಕೊಳ್ಳದಿದ್ದರೆ ಸರ್ಕಾರ ಮರಳಿ ಪಡೆಯಲಿದೆ ಎಂದು ಸುದ್ದಿ ಹಬ್ಬಿದ್ದರಿಂದ ಪಟ್ಟಣದ ಕೆನರಾ ಮತ್ತು ಎಂ.ಜಿ. ಬ್ಯಾಂಕ್ ಶಾಖೆಗಳಲ್ಲಿ ಖಾತೆ ಹೊಂದಿರುವ ಸುತ್ತಲಿನ 15ಕ್ಕೂ ಹೆಚ್ಚು ಗ್ರಾಮದ ಸಾವಿರಾರು ಜನ ಪೇಟೆ ಓಣಿ ಹಾಗೂ ಬಾಬಜಿ ಸರ್ಕಲ್​ವರೆಗೂ ಚಪ್ಪಲಿಗಳನ್ನು ಸರದಿಯಲ್ಲಿ ಬಿಟ್ಟು ಗುಂಪಾಗಿ ನಿಂತಿದ್ದರು.

ಅಧಿಕ ಬಿಸಿಲು ಇದ್ದುದರಿಂದ ಚಪ್ಪಲಿಗಳನ್ನು ಸರದಿಯಲ್ಲಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ನಿಂತಿದ್ದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗುಂಪು ಚದರಿಸಿ ಜನತೆಯನ್ನು ಸರದಿಯಲ್ಲಿ ನಿಲ್ಲಿಸಿದರು.

‘ಯಾವುದೇ ಹಣ ಮರಳಿ ಹೋಗುವುದಿಲ್ಲ. ಜನ ಆತಂಕ ಬಿಟ್ಟು ಮನೆಯಲ್ಲಿಯೆ ಇದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು’ ಎಂದು ಗ್ರಾಪಂ ಅಧ್ಯಕ್ಷ ಪ್ರದೀಪ ಶೇಷಗಿರಿ ಮನವಿ ಮಾಡಿದ್ದಾರೆ.