ಹಾಸನ: ಎಸ್‌ಸಿ/ಎಸ್‌ಟಿ, ಟಿಎಸ್‌ಪಿ ಯೋಜನೆ ಹಣ ಬೇರೆ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದನ್ನು ಖಂಡಿಸಿ ಯದುವೀರ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.
ಬಿಜೆಪಿ ಕಚೇರಿಯಿಂದ ಮೆರವಣಿಗೆ ಹೊರಟ ಮುಖಂಡರು ಹಾಗೂ ಕಾರ್ಯಕರ್ತರು, ಡಿಸಿ ಕಚೇರಿ ಆವರಣ ತಲುಪಿ ಕೆಲಹೊತ್ತು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಯಾವುದೇ ಕಾರಣಕ್ಕೂ ಪರಿಶಿಷ್ಟರಿಗೆ ಮೀಸಲಿಟ್ಟಿರುವ ಹಣವನು ಗ್ಯಾರಂಟಿ ಯೋಜನೆಗಳಿಗೆ ಬಳಸಬಾರದು ಎಂದು ಆಗ್ರಹಿಸಿದರು. ನಂತರ ಡಿಸಿ ಸಿ.ಸತ್ಯಭಾಮಾ ಅವರಿಗೆ ಮನವಿ ಸಲ್ಲಿಸಿದರು.
ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಮತ್ತೆ ಎಸ್‌ಸಿ, ಎಸ್ಟಿಗೆ ಮೀಸಲಿಟ್ಟ ಹಣದಲ್ಲಿ 14,885 ಕೋಟಿ ರೂ.ಪಡೆಯಲು ಹುನ್ನಾರ ನಡೆದಿದೆ. ಇದರ ವಿರುದ್ಧ ನಾವು ವಿಧಾನ ಸೌಧದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತೇವೆ. ಎಸ್‌ಸಿ/ಎಸ್ಟಿ ನಿಗಮ ಹೊರತುಪಡಿಸಿ ಬೇರೆ ನಿಗಮಗಳಲ್ಲಿ ಏಕೆ ಹಣ ತೆಗೆದಿಲ್ಲ? ಹೀಗಿದ್ದರೂ ದಲಿತ ಸಚಿವರು ಪ್ರಶ್ನೆ ಮಾಡುತ್ತಿಲ್ಲ. ತಳ ಸಮುದಾಯಕ್ಕೆ ನ್ಯಾಯ ಕೊಡಿಸಲು ನಮ್ಮ ಹೋರಾಟ ನಿರಂತರ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಸೇರಿ ಹಲವರು ಉಪಸ್ಥಿತರಿದ್ದರು.