ಜಿಲ್ಲೆ

‘ಹಣ ದುರುಪಯೋಗ’ ಸಿಆರ್‌ಪಿ ಅಮಾನತು

ಹನೂರು: ತಾಲೂಕಿನ ಹೊಸಪೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಕೋಣೆ ನಿರ್ಮಾಣ ಸಂಬಂಧ ಹಣ ದುರುಪಯೋಗ ಪಡಿಸಿಕೊಂಡಿದ್ದ ಹಿನ್ನೆಲೆಯಲ್ಲಿ ರಾಮಾಪುರ ಕ್ಲಸ್ಟರ್‌ನ ಸಿಆರ್‌ಪಿ ಮಹೇಶ್‌ಕುಮಾರ್ ಅವರನ್ನು ಬಿಇಒ ಗುರುಲಿಂಗಯ್ಯ ಅವರು ಅಮಾನತುಗೊಳಿಸಿ ಸೊಮವಾರ ಆದೇಶಿಸಿದ್ದಾರೆ.

ತಾಲೂಕಿನ ಹೊಸಪೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹೇಶ್‌ಕುಮಾರ್ 2021ರಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಅಡುಗೆ ಕೋಣೆ ನಿರ್ಮಾಣಕ್ಕೆ ಅಕ್ಷರ ದಾಸೋಹ ಕಾರ್ಯಕ್ರಮದಡಿ ತಾಲೂಕು ಪಂಚಾಯಿತಿ ವತಿಯಿಂದ 3,16,200 ರೂ. ಎಸ್‌ಡಿಎಂಸಿ ಖಾತೆಗೆ ಜಮೆಯಾಗಿತ್ತು. ಅಡುಗೆ ಕೋಣೆ ನಿರ್ಮಾಣ ಕಾಮಗಾರಿ ಶೇ.40ರಷ್ಟು ಮಾತ್ರ ಆಗಿದ್ದು, 1,56,270 ರೂ. ವೆಚ್ಚವಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಎಸ್‌ಡಿಎಂಸಿ ಖಾತೆಯಿಂದ ಈ ಯೋಜನೆಯ ಸಂಪೂರ್ಣ ಹಣವನ್ನು ಡ್ರಾ ಮಾಡಿಕೊಂಡು ದುರುಪಯೋಗಪಡಿಸಿಕೊಂಡಿದ್ದರು. ಈ ಸಂಬಂಧ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ ಯಾವುದೇ ಕ್ರಮವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಇಒ ಗುರುಲಿಂಗಯ್ಯ ಅವರು ಪ್ರಸ್ತುತ ರಾಮಾಪುರ ಕ್ಲಸ್ಟರ್‌ನ ಸಿಆರ್‌ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹೇಶ್‌ಕುಮಾರ್ ಅವರನ್ನು ಅಮಾನತುಪಡಿಸಿದ್ದಾರೆ.