ಚಿತ್ರದುರ್ಗ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುಚೇತ ಎಸ್ ನೆಲವಗಿ ಇಲಾಖೆ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ ರಾಜ್ಯ ಸಮಿತಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಹಣ ದುರುಪಯೋಗ ಸಂಬಂಧ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಬೂದಿಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ, ಹುಲ್ಲುಬನ್ನಿ ಖರಾಬು ಭೂಮಿಯನ್ನು ಭೂ ಮಾಲೀಕರಲ್ಲಿ ಕೆಲವರು ಅಕ್ರಮವಾಗಿ ಸಾಗುವಳಿ ಮಾಡಿಕೊಂಡಿರುವುದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಚಳ್ಳಕೆರೆ ತಾಲೂಕು ಚೌಳೂರು ಬೂದಿಹಳ್ಳಿ, ಹೊಟ್ಟೆಪ್ಪನಹಳ್ಳಿ, ತೋರೆಬೀರನಹಳ್ಳಿ ಗ್ರಾಮಗಳಲ್ಲಿ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ, ನೊಂದ ಸಂತ್ರಸ್ಥರಿಗೆ ಹಾಗೂ ಅವಲಂಬಿತ ಕುಟುಂಬಗಳಿಗೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ರಾಜ್ಯ ಆದಿಜಾಂಬವ ನಿಗಮದಿಂದ ನೇರ ಸಾಲ ಮತ್ತು ಸಹಾಯಧನ ನೀಡಬೇಕು. ಅದಕ್ಕಾಗಿ ಫಲಾನುಭವಿ ಪಟ್ಟಿ ಅನುಮೋದಿಸಿ, ಶಿಫಾರಸು ಮಾಡಿ ನಿಗಮಕ್ಕೆ ಕಳುಹಿಸಬೇಕು ಎಂದು ಕೋರಿದರು.
ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಭೀಮನಕೆರೆ ಶಿವಮೂರ್ತಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಎನ್. ಪ್ರಕಾಶ್, ಪಿ. ಜಯಣ್ಣ, ಮುಖಂಡರಾದ ಮಂಜುನಾಥ ವರವು, ಬಿ.ಒ. ತಿರುಮಲೇಶ, ಮೈಲಾರಿ ಗೊರ‌್ಲಕಟ್ಟೆ, ಸತೀಶ ಬೂದಿಹಳ್ಳಿ, ಪಾತಲಿಂಗಪ್ಪ, ಪುಟ್ಟಮ್ಮ, ಮಂಜಮ್ಮ, ತಿಮ್ಮಕ್ಕ ಇತರರಿದ್ದರು.