ಜಿಲ್ಲೆ

ಹಣ ದುರುಪಯೋಗ ಗ್ರಾ.ಪಂ. ಕಾರ್ಯದರ್ಶಿ ಅಮಾನತ್ತು

ಹಾಸನ: ಒಂದುವರೆ ಕೋಟಿರೂ. ಹಣ ದುರುಪಯೋಗ ಆರೋಪಕ್ಕೆ ಸಂಬಂಧಪಟ್ಟಂತೆ ಅರಕಲಗೂಡು ತಾಲೂಕು ಕೊಣನೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಿ.ಎನ್.ಭುವನ್ ಅವರನ್ನು ಅಮಾನತ್ತು ಮಾಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಅವರು ಆದೇಶಿಸಿದ್ದಾರೆ.

ಕೊಣನೂರು ಮಾತ್ರವಲ್ಲದೇ ಗಂಗೂರು ಗ್ರಾಮ ಪಂಚಾಯಿತಿ ಪ್ರಭಾರ ಕಾರ್ಯದರ್ಶಿಯಾಗಿರುವ ಬಿ.ಎನ್.ಭುವನ್ ಅವರು 15ನೇ ಹಣಕಾಸು, ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲ, ಸಿಬ್ಬಂದಿ ವೇತನ ಖಾತೆ, ಗ್ರಾಮ ವಿಕಾಸ ಯೋಜನೆಯಲ್ಲಿ ಒಟ್ಟು 1,49,78,753 (ಆಕ್ಷೇಪಣೆ 97,58,603ರೂ., ವಸೂಲಾತಿ 52,20,150 ರೂ. ) ಗಳನ್ನು ನಿಯಮಬಾಹಿರವಾಗಿ ದುರುಪಯೋಗ ಪಡಿಸಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮ 10 ಅಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತು ಮಾಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆದೇಶಿಸಿದ್ದಾರೆ.

ನೌಕರರು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೆ ಕೇಂದ್ರಸ್ಥಾನವನ್ನು ಬಿಡತಕ್ಕದ್ದಲ್ಲ. ಕೆಸಿಎಸ್‌ಆರ್ ನಿಯಮ 98 ರಂತೆ ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಸರ್ಕಾರದ ಹಣವನ್ನು ದುರುಪಯೋಗ ಮಾಡಿದ ಪ್ರಕರಣಗಳಲ್ಲಿ ಯಾರೇ ಆಗಲಿ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.