ಜಿಲ್ಲೆ

ಹಣ ದುರುಪಯೋಗ; 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಶಿವಮೊಗ್ಗ: ಕೆರೆ ಬಳಕೆದಾರರ ಸಂಘಗಳಿಗೆ ತಪ್ಪು ಮಾಹಿತಿ ನೀಡಿ 2.54 ಲಕ್ಷ ರೂ. ದುರುಪಯೋಗ ಮಾಡಿಕೊಂಡಿದ್ದ ಮಾಜಿ ಜಿಲ್ಲಾ ಸಾಮಾಜಿಕ ತಜ್ಞರಿಗೆ ಶಿಕಾರಿಪುರದ 2ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ವಿನೋದ್ ಎಲ್,ರಾಮದುರ್ಗ (29) ಶಿಕ್ಷೆಗೆ ಒಳಗಾದ ಯುವಕ.
ವಿನೋದ್ 2011ರ ಮಾ.23ರಿಂದ 2013ರ ಮಾ.30ರ ಅವಧಿಯಲ್ಲಿ ಜಿಲ್ಲಾ ಸಾಮಾಜಿಕ ತಜ್ಞರಾಗಿ ಕಾರ್ಯನಿರ್ವಹಿಸಿದ್ದು, ಕರ್ತವ್ಯದಿಂದ ಬಿಡುಗಡೆ ಹೊಂದಿದ ನಂತರವೂ ಕೆರೆ ಬಳಕೆದಾರರ ಸಂಘಗಳಿಗೆ ತಪ್ಪು ಮಾಹಿತಿ ನೀಡಿ ಹಾಗೂ ಚೆಕ್‌ಗೆ ನಕಲಿ ಸಹಿ ಮಾಡಿ ಲಕ್ಷಾಂತರ ಹಣ ದುರುಪಯೋಗ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ಬಗ್ಗೆ ಜಲ ಸಂವರ್ಧನೆ ಯೋಜನಾ ಸಂಘದ ಶಿಕಾರಿಪುರ ಘಟಕದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಶಿರಾಳಕೊಪ್ಪ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಅಂದಿನ ಶಿರಾಳಕೊಪ್ಪ ಪಿಎಸ್‌ಐ ಜಿ.ಗುರುಪ್ರಸಾದ್ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಅವಿನಾಶ್ ಎಂ. ಘಾಳಿ ಅವರು ಆರೋಪ ಸಾಬೀತಾಗಿದ್ದರಿಂದ ವಿನೋದ್‌ಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕಿ ಎಚ್.ಎಸ್.ಕೀರ್ತಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.