ಜಿಲ್ಲೆ

ಹಣ ದುಪ್ಪಟ್ಟು ಆಮಿಷ 20 ಲಕ್ಷ ದೋಖಾ

ಕಲಬುರಗಿ: ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿ ಹಣ ದುಪ್ಪಟ್ಟು ಮಾಡಿಕೊಡುತ್ತೇವೆ ಎಂದು ನಂಬಿಸಿ ಸಹೋದರಿಯರಿಂದ ೨೦ ಲಕ್ಷ ರೂ. ವಂಚಿಸಿದ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯೂ ರಾಘವೇಂದ್ರ ಕಾಲನಿಯ ನಿವಾಸಿ ಎಕ್ಸಿಸ್ ಬ್ಯಾಂಕ್‌ನಲ್ಲಿ ಟ್ರೇನಿಂಗ್ ಮ್ಯಾನೇಜರ್ ಆಗಿರುವ ಪೂರ್ಣಿಮಾ ಕುಲ್ಕರ್ಣಿ ಮತ್ತು ಸಹೋದರಿ ಪ್ರತಿಮಾ ವಂಚನೆಗೆ ಒಳಗಾದವರು.
ಪೂರ್ಣಿಮಾ ಅವರ ಗೆಳತಿ ಕವಿತಾ ಕ್ವಿಸ್ಟ್ ಕ್ಯಾಪಿಟಲ್ ಟ್ರೇಡಿಂಗ್ ಕಂಪನಿ ಪ್ರಾÈಂಚೈಸಿ ಪಡೆದಿದ್ದು, ತರಬೇತಿ ನೀಡುತ್ತೇವೆ ಎಂದಿದ್ದಾಳೆ. ಕವಿತಾ ಜತೆಗೆ ಹುಬ್ಬಳ್ಳಿಯ ಹಣಮಂತ ಕೊಳ್ಳುರ ಎಂಬಾತನನ್ನು ಭೇಟಿ ಮಾಡಿ, ೨೦ ಸಾವಿರ ರೂ. ನೀಡಿ ಪ್ರವೇಶ ಪಡೆದಿದ್ದು, ನಗರದ ಹೈಕೋರ್ಟ್ ಬಳಿಯ ಹೊಟೇಲ್‌ವೊಂದರಲ್ಲಿ ಎಂಟು ದಿನ ಪೂರ್ಣಿಮಾ ಮತ್ತು ಪ್ರತಿಮಾ ಅವರಿಗೆ ತರಬೇತಿ ನೀಡಿದ್ದಾನೆ.
೨೦೨೩ ಸೆಪ್ಟೆಂಬರ್‌ನಲ್ಲಿ ೧೦ ಲಕ್ಷ ರೂ. ನೀಡಿದರೆ ಟ್ರೇಡಿಂಗ್‌ನಲ್ಲಿ ಹಣ ಹೂಡಿ ದುಪ್ಪಟ್ಟು ಮಾಡಿಕೊಡುತ್ತೇನೆ ಎಂದು ಹಣಮಂತ ಕೊಳ್ಳುರನು ಪೂರ್ಣಿಮಾ ಅವರನ್ನು ನಂಬಿಸಿದ್ದಾನೆ. ಅದರಂತೆ ೧೦ ಲಕ್ಷ ರೂ. ನೀಡಿದ್ದಾರೆ. ಈ ಬಗ್ಗೆ ಕರೆ ಮಾಡಿ ಕೇಳಿದಾಗ ಯಾವ ೧೦ ಲಕ್ಷ, ಯಾರಿಗೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾನೆ.
ಅದೇ ರೀತಿ ಆಮಿಷಕ್ಕೆ ಒಳಗಾದ ಪ್ರತಿಮಾ ಸಹ ೨೦೨೪ ಫೆ.೭ರಂದು ಸಂತೋಷ ಎನ್ನುವರ ಬಳಿ ೧೦ ಲಕ್ಷ ಕೈಗಡ ಸಾಲ ಪಡೆದು, ಹಣಮಂತ ಕೊಳ್ಳುರ ಹೇಳಿದ ಕಿಶೋರ ಪೂಜಾರಿ ಎಂಬಾತನಿಗೆ ೧೦ ಲಕ್ಷ ರೂ. ನೀಡಿದ್ದಾರೆ. ಆದರೆ ಮರಳಿ ನೀಡುತ್ತಿಲ್ಲ ಎಂದು ಸೆನ್ ಠಾಣೆಗೆ ದೂರು ನೀಡಿದ್ದಾರೆ.