ಮೈಸೂರು
ಕೇವಲ ಹಣ ಒಂದರಿಂದಲೇ ಎಲ್ಲವೂ ಆಗುವುದಿಲ್ಲ. ನಮ್ಮ ಒಳಗಿನ ಶಕ್ತಿಯನ್ನು ಜಾಗೃತಗೊಳಿಸುವ ಕೆಲಸ ಆಗಬೇಕು. ಆಗ ಮಾತ್ರ ಜೀವನವನ್ನು ನೋಡುವ, ಅನುಭವಿಸುವ ಆನಂದ ದೊರೆಯುತ್ತದೆ ಎಂದು ಬೆಂಗಳೂರು ಉಪಾಸನಾ ಫೌಂಡೇಷನ್‌ನ ಸಂಸ್ಥಾಪಕ ಸದ್ಗುರು ಶ್ರೀರಾಮ ಗುರೂಜಿ ಹೇಳಿದರು.
ಪರಮಹಂಸ ಯೋಗ ಮಹಾವಿದ್ಯಾಲಯದ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ಶಿವಾನಂದ ಜ್ಞಾನಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಕುಂಡಲಿನಿ ಶಕ್ತಿಯ ಜಾಗೃತಿಯಿಂದ ಆತ್ಮದ ಬೆಳಕು ಕಾಣುವ ದಿವ್ಯೋಪನ್ಯಾಸ, ಅಂತರ ಶಾಲಾ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಎಲ್ಲ ರೀತಿಯ ಸಂಬಂಧಗಳು ಹಾಳಾಗುತ್ತಿವೆ. ಮೊಬೈಲ್‌ನ ಸಿಮ್ ಕಾರ್ಡ್ ಬದಲಿಸಿದಂತೆ ಸಂಬಂಧಗಳನ್ನು ಬದಲಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರತಿಯೊಬ್ಬರ ಜೀವನವೂ ಉತ್ಸಾಹ, ಆನಂದದಿಂದ ಕೂಡಿರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಬಿಪಿ, ಶುಗರ್, ಹೃದಯ ಸಂಬಂಧಿ ರೋಗಗಳು ಹೆಚ್ಚಾಗುತ್ತಿವೆ. ಮಾನಸಿಕ ಆರೋಗ್ಯದ ಜತೆಗೆ ದೈಹಿಕ ಆರೋಗ್ಯವೂ ಚೆನ್ನಾಗಿರಬೇಕು ಎಂದರು. ಸಾಧನೆಗೆ ಭಾವನೆಯೇ ಸರ್ವೋತ್ತಮ. ಆದ್ದರಿಂದ ನಮ್ಮ ಮನಸ್ಥಿತಿ ಸಕಾರಾತ್ಮಕವಾಗಿರಬೇಕು. ವಿಶಾಲ, ವಿಸ್ತಾರ ಮನೋಭಾವದಿಂದ ಕೂಡಿರಬೇಕು ಎಂದು ಹೇಳಿದರು.
ಕುಂಡಲಿನಿಯು ಪತಂಜಲಿ ಯೋಗದಲ್ಲಿ ಇಲ್ಲ. ಇಂದು ಹಠಯೋಗ ಕುರಿತದ್ದು ಹಾಗೂ ತಂತ್ರದ್ದು. ಕೇವಲ ವಿಗ್ರಹ ಪೂಜಿಸುವುದರಿಂದ ದೈವತ್ವ ಸಿಗುವುದಿಲ್ಲ. ಅದಕ್ಕೆ ಪ್ರಾಣ ಪ್ರತಿಷ್ಠೆ ಮಾಡಿದರೆ ಮಾತ್ರ ದೈವತ್ವ ಸಿಗುತ್ತದೆ. ಅದೇ ರೀತಿ ಕುಂಡಲಿನಿ ಕೂಡ. ನಮ್ಮಲ್ಲಿರುವ ಶಕ್ತಿಯನ್ನು ಜಾಗೃತಿಗೊಳಿಸುವಂಥದ್ದು ಎಂದು ಅವರು ವ್ಯಾಖ್ಯಾನಿಸಿದರು.
ಮೈಸೂರು ಯೋಗೀಶ್ ಸಂಸ್ಥೆಯ ಸದಸ್ಯೆ ಬಿ.ಎಸ್. ಸೀಮಾ ಧ್ಯಾನದ ಮಹತ್ವ ಕುರಿತು ಮಾತನಾಡಿದರು.
ಅಂತರಶಾಲಾ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸುಯೋಗ್ ಆಸ್ಪತ್ರೆ ಸಂಸ್ಥಾಪಕ ಡಾ.ಎಸ್.ಪಿ.ಯೋಗಣ್ಣ, ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಕೆ.ಜಿ. ದೇವರಾಜ್, ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಜಿಲ್ಲಾ ಯೋಗ ಸ್ಪೋರ್ಟ್ಸ್ ಫೌಂಡೇಷನ್ ಅಧ್ಯಕ್ಷ ಪಿ.ಎನ್. ಗಣೇಶಕುಮಾರ್, ಮೈಸೂರು ಯೋಗ ಅಸೋಸಿಯೇಷನ್ ಕಾರ್ಯದರ್ಶಿ ಎನ್. ಅನಂತ, ಡಾ.ಲಕ್ಷ್ಮೀ ಶ್ರೀನಿವಾಸ್, ಗುರೂಜಿ ಗೋಶಾಲೆ ಸಂಸ್ಥಾಪಕ ಸುಂದರ್, ಎಂ.ಆರ್. ಮುರಳೀಧರ್, ಪತಂಜಲಿ ಯೋಗ ಸಮಿತಿಯ ಕಾರ್ಯದರ್ಶಿ ಎಸ್. ಶಶಿಕುಮಾರ್, ಪರಮಹಂಸ ಯೋಗ ಮಹಾವಿದ್ಯಾಲಯ ಸಂಸ್ಥಾಪಕ ಶಿವಪ್ರಕಾಶ್, ಪ್ರಾಂಶುಪಾಲ ಬಿ.ಜಿ. ವಿಜಯಕುಮಾರ್, ಆರ್. ಭಾವನಾ ಇದ್ದರು.