ಜಿಲ್ಲೆ

ಹಡಪದ ಅಪ್ಪಣ್ಣ ಶರಣ ಸಂಕುಲದ ದ್ರುವತಾರೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಡಪದ ಅಪ್ಪಣ್ಣ 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದರಲ್ಲದೇ ಇಡೀ ಶರಣ ಸಂಕುಲಕ್ಕೆ ದ್ರುವವತಾರೆಯಂತಿದ್ದರು ಎಂದು ರಂಗ ಕಲಾವಿದ ಮಹಾದೇವ ಹಡಪದ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ನಿಜಸುಖಿ ಹಡಪದ ಅಪ್ಪಣ್ಣ ಹಾಗೂ ಲಿಂಗಮ್ಮರ ಸಂಸ್ಮರಣೆ ದತ್ತಿ ನಿಮಿತ್ತ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮರ ಕುರಿತು ಉಪನ್ಯಾಸ ನೀಡಿದರು.
ಹಡಪದ ಅಪ್ಪಣ್ಣ ರಚಿಸಿದ 250ಕ್ಕೂ ಹೆಚ್ಚು ವಚನಗಳು ಬೆಡಗಿನ ವಚನಗಳಾಗಿದ್ದು, ವೈಚಾರಿಕ ನೆಲೆಗಟ್ಟಿನ ಮೇಲೆ ರಚನೆಯಾಗಿವೆ. ಕಾಲಜ್ಞಾನದ ವಚನಗಳು ಅರಿವಿನ ಬೆಳಕು ತೋರುವ, ಆತ್ಮ ಪರಿಶೋಧನೆ ಮಾಡಿಕೊಳ್ಳುವಂತಿವೆ. ಅಪ್ಪಣ್ಣನವರಿಗೆ ಸೇವೆಯೇ ಜೀವನದ ಪರಮ ಗುರಿಯಾಗಿತ್ತು. ಶರಣರು ರಚಿಸಿದ ವಚನ ಸಾಹಿತ್ಯ ಉತ್ಕೃಷ್ಟ ಸಾಹಿತ್ಯವಾಗಿದ್ದು, ಅದು ಮಹಾಕಾವ್ಯವಾಗಿ ರೂಪಗೊಳ್ಳದೇ ಇರುವುದು ವಿಷಾದನೀಯ ಎಂದರು.
ಹಡಪದ ಅಪ್ಪಣ್ಣ ಬಸವಣ್ಣನವರ ಬಾಲ್ಯದ ಒಡನಾಡಿಯಾಗಿದ್ದು, ಅವರ ಸ್ವಾಮಿನಿಷ್ಠೆ ಹಾಗೂ ಕಾರ್ಯತತ್ಪರತೆ ಕಂಡು ಬಸವಣ್ಣನವರು ಅವರನ್ನು ತಮ್ಮ ಅಪ್ತ ಕಾರ್ಯದರ್ಶಿಯನ್ನಾಗಿ ಹಾಗೂ ಅನುಭವ ಮಂಟಪದ ಕಾರ್ಯದರ್ಶಿಯಗಿ ನೇಮಿಸಿದ್ದರು. ಅಪ್ಪಣ್ಣ ಹಾಗೂ ಲಿಂಗಮ್ಮರ ವಚನಗಳು ಅಜ್ಞಾನಿಗಳಿಗೆ, ಶೋಷಿತರಿಗೆ ದಾರಿದೀಪವಾಗಿವೆ. ಶರಣ ಸಂಕುಲ ತಮ್ಮ ವಚನಗಳ ಮೂಲಕ ಇನ್ನೂ ಜೀವಂತವಾಗಿದ್ದಾರೆ ಎಂದರು.
ದತ್ತಿದಾನಿ ಪ್ರೊ. ಭೀಮರಾಯ ಹಡಪದ ಮಾತನಾಡಿ, ಹಡಪದ ಅಪ್ಪಣ್ಣನವರು ಆ ಕಾಲದ ಸಮಾಜದ ಅಂಕು-ಡೊಂಕು, ಕಂದಾಚಾರಗಳನ್ನು ವಚನಗಳ ಮೂಲಕ ತಿದ್ದುವ ಕಾರ್ಯ ಮಾಡಿದರು. ಅವರ ವಚನಗಳು ದೃಷ್ಟಾಂತದಿಂದ ಕೂಡಿವೆ. ಬಸವಣ್ಣನವರ ಜೀವನದ ಒಡನಾಡಿಯಾದ ಅಪ್ಪಣ್ಣ ಹಾಗೂ ಲಿಂಗಮ್ಮರು ನಮಗೆಲ್ಲಾ ಸ್ಮರಣೀಯರು ಎಂದು ಹೇಳಿದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸುಮಾ ಹಡಪದ, ಶಂಕರ ಹಡಪದ, ಮಹಾಂತೇಶ ಹಡಪದ, ಶಿವಾನಂದ ಹಡಪದ, ಮಧುಮತಿ ಸಣಕಲ್, ಎಂ.ಎಸ್. ನರೇಗಲ್, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.