ಹೂವಿನಹಡಗಲಿ: ಪಟ್ಟಣದ ಕಾಯಕ ನಗರದಲ್ಲಿ ಹಕ್ಕುಪತ್ರ ನೀಡಿರುವ ನಿವೇಶನಗಳನ್ನು ಗುರುತಿಸಿಕೊಂಡು ಆಗ್ರಹಿಸಿ ಪರಿಶಿಷ್ಟ ಪಂಗಡದ ಕುಶಲಕರ್ಮಿಗಳು ಜಾಗ ಸ್ವಚ್ಛಗೊಳಿಸುವ ಮೂಲಕ ಸೋಮವಾರ ಪ್ರತಿಭಟನೆ ನಡೆಸಿದರು.
ಕಾಯಕನಗರದಲ್ಲಿ ಸಣ್ಣ ಕೈಗಾರಿಕೆ ಇಲಾಖೆಯ ಜಾಗದಲ್ಲಿ ಗುಡಿ ಕೈಗಾರಿಕೆ ನಡೆಸುವ ಪರಿಶಿಷ್ಟ ಪಂಗಡದ ಕುಶಲಕರ್ಮಿಗಳಿಗೆ 100 ನಿವೇಶನಗಳನ್ನು 2005ರಲ್ಲಿ ಹಂಚಿಕೆ ಮಾಡಿ 2019ರಲ್ಲಿ ಹಕ್ಕುಪತ್ರಗಳನ್ನು ನೀಡಲಾಗಿದೆ. ಆದರೆ, ನಮ್ಮ ನಿವೇಶನ ಗುರುತಿಸಿಕೊಡಿ ಎಂದು ಕೇಳಿದರೆ ಪುರಸಭೆ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ದೂರಿದರು.
ನಮ್ಮ ನಿವೇಶನದಲ್ಲಿ ಬೇರೆಯವರಿಗೆ ಗುಡಿಸಲು ಹಾಕಿಕೊಳ್ಳಲು ಅನುಮತಿ ನೀಡಲಾಗಿದೆ. ನಾವೇ ನಿವೇಶನಗಳನ್ನು ಸ್ವಚ್ಛಗೊಳಿಸಿಕೊಂಡು ಹಂಚಿಕೆ ಮಾಡಿಕೊಳ್ಳುತ್ತೇವೆ ಎಂದು ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದರು. ಕಾಯಕ ನಗರದ ಪರಿಶಿಷ್ಟ ಪಂಗಡದ ಹಿತರಕ್ಷಣಾ ಟ್ರಸ್ಟ್ ಉಪಾಧ್ಯಕ್ಷ ಯು.ಮಂಜುನಾಥ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಸಹಕಾರ್ಯದರ್ಶಿ ಮಂಜುನಾಥ, ಖಜಾಂಚಿ ಜಗನ್ನಾಥ, ಸಂಘಟನಾ ಕಾರ್ಯದರ್ಶಿ ಜೀವರಾಜ, ಮಹಿಳಾ ಸಂಘಟನಾ ಕಾರ್ಯದರ್ಶಿ ಮಹಾದೇವಿ, ಸದಸ್ಯರಾದ ಪಕ್ಕೀರಪ್ಪ, ರತ್ನಮ್ಮ, ಶಿಲ್ಪಾ, ಕಾಳಮ್ಮ ಇತರರಿದ್ದರು.