ನರೇಗಲ್ಲ: ಯಾವುದು ಹೌದು ಅದು ಅಲ್ಲ, ಯಾವುದು ಅಲ್ಲ ಅದು ಹೌದು ಎಂಬ ಸರ್ವಕಾಲಿಕ ಸತ್ಯ ಸಂದೇಶ ನೀಡಿದ ಕೋಡಿಕೊಪ್ಪದ ಹಠಯೋಗಿ ವೀರಪ್ಪಜ್ಜನ ಪವಾಡ, ಲೀಲೆಗಳಿಗೆ ಲೆಕ್ಕವಿಲ್ಲ. ಹುಚ್ಚನಾಗಿದ್ದುಕೊಂಡು ಜಗದ ಹುಚ್ಚು ಬಿಡಿಸಿದ ಮಹಾನ್ ಸಂತ ಹುಚ್ಚೀರಪ್ಪಜ್ಜನವರು.
ಅವಿಭಜಿತ ಧಾರವಾಡ ಜಿಲ್ಲೆ ಈಗಿನ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕೋಡಿಕೊಪ್ಪ (ಶಿವಪುರ) ಗ್ರಾಮದ ಚನ್ನಯ್ಯ ಹಾಗೂ ಕಲ್ಯಾಣಮ್ಮನವರ ಪುತ್ರನಾಗಿ ಕ್ರಿ.ಶ. 1855ರಲ್ಲಿ ವೀರಯ್ಯನವರು ಜನಿಸಿದರು. ಬಾಲ್ಯದ ದಿನಗಳಲ್ಲಿ ಅಕ್ಷರ ಜ್ಞಾನ ಪ್ರಾಪ್ತಿಯಾಯಿತೇ ವಿನಃ ಹೆಚ್ಚಿನ ವಿದ್ಯಾರ್ಜನೆ ಆಗಲಿಲ್ಲ. ಯಾರೊಡನೆಯೂ ಬೆರೆತು ಬಾಲಬುದ್ಧಿಯ ಪ್ರಕ್ರಿಯೆಗಳನ್ನೂ ಮಾಡದಿರುವುದನ್ನು ಕಂಡು ತಂದೆ-ತಾಯಿ ಚಿಂತಿತರಾದರು. ಮಗನನ್ನು ಶಾಲೆಗೆ ಕಳಿಸುವುದರಿಂದ ಪ್ರಯೋಜನವಾಗದು ಎಂದು ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ತಿಳಿಹೇಳಿದರು. ವೀರಯ್ಯನಿಗೆ ಆಗ ಉದಾಸಿನತನ-ಅಲಸ್ಯವೆಂಬುದು ಗೊತ್ತಿರಲಿಲ್ಲ. ಯಾವ ಕೆಲಸ ಮಾಡಿದರೂ ಮನ ಒಪ್ಪುವಂತೆ ಮಾಡುತ್ತಿದ್ದ. ಕೆಲಸದಲ್ಲಿ ತಲ್ಲಿನನಾದರೇ ಊಟ, ನಿದ್ರೆ ಮಾಡುವುದನ್ನೇ ಮರೆಯುತ್ತಿದ್ದ.
ಕಾಶಿಯಿಂದ ರಾಮೇಶ್ವರಕ್ಕೆ ಹೋಗುತ್ತಿದ್ದ ಉತ್ತರ ಭಾರತದ ನಾಗಾಸಾಧುಗಳು ಕೋಡಿಕೊಪ್ಪದ ಉಣಚಗೇರಿ ಹಾಗೂ ಹಳೆಮನಿ ಅವರ ತೋಟದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಒಂದು ದಿನ ಹೀಗೆ ಉಳಿದುಕೊಂಡಾಗ ಸಾಧುವೊಬ್ಬರು ವೀರಯ್ಯನಿದ್ದ ತೋಟಕ್ಕೆ ಬಂದು ವೀರಯ್ಯನಿಗೆ ಗಾಂಜಾ ಸೇದಲು ಮತ್ತು ಸೇಂದಿ ಕುಡಿಯಲು ಕಲಿಸುತ್ತಾರೆ. ಜಂಗಮರ ಹುಡುಗನೊಬ್ಬ ಈ ರೀತಿ ಅನಾಚಾರಿಯಾಗಿದ್ದನ್ನು ಕಂಡು ಮನೆಯಲ್ಲಿ ದೊಡ್ಡ ರಂಪಾಟ ನಡೆಯ್ತುತದೆ. ಆಗ ವೀರಯ್ಯನನ್ನು ಮನೆಯಿಂದ ಹೊರಹಾಕಲಾಗುತ್ತದೆ. ಆಗ ವೀರಯ್ಯ ಅರೆ ಹುಚ್ಚನಂತೆ ಅತ್ತಿತ್ತ ತಿರುಗಾಡುತ್ತ ಅನೇಕ ಪವಾಡಗಳನ್ನು ಮಾಡುತ್ತ ಜನಮಾನಸವನ್ನು ತನ್ನಡೆಗೆ ಸೆಳೆದುಕೊಂಡ. ಈತನ ಪವಾಡಗಳನ್ನು ಅರಿತ ಅನೇಕ ಮಠಾಧೀಶರು, ಶರಣರು ಹುಚ್ಚಿರಪ್ಪಜ್ಜನ ಆರ್ಶೀವಾದ ಪಡೆಯುವ ಮೂಲಕ ಅಜ್ಜನ ಮಹಿಮೆಯನ್ನು ಜಗತ್ತಿಗೆ ಸಾರಿದ್ದಾರೆ.
ವೀರಪ್ಪಜ್ಜ 1925 ಮಾರ್ಚ್ 23ರಂದು ಲಿಂಗೈಕ್ಯರಾದರು. ಅವರ ಸಮಾಧಿಯನ್ನು ಹಾಲಕೆರೆಯ ಗುರು ಅನ್ನದಾನ ಸ್ವಾಮೀಜಿಗಳ ಅಣತಿ ಮೇರೆಗೆ ನರೇಗಲ್ಲನ ಹಾಲಕೆರೆಯ ಶಾಖಾಮಠದ ಎದುರಿಗಿನ ಬಯಲು ಜಾಗದಲ್ಲಿ ಮಾಡಲಾಯಿತು. ಆದರೆ, ವೀರಪ್ಪಜ್ಜ ಯಾವಾಗಲೂ ಕುಳಿತಿರುತ್ತಿದ್ದ ಡೋಣಿ ಕಲ್ಲು ಏರಿಯ ಜಾಗದಲ್ಲಿಯೂ ಒಂದು ಗದ್ದುಗೆ ನಿರ್ವಿುಸಿ, ಪಾದರಸದ ಲಿಂಗವನ್ನು ಪ್ರತಿಷ್ಠಾಪಿಸಿಭಕ್ತರು ದರ್ಶನಾಶೀರ್ವಾದ ಪಡೆಯುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಲಿಂಗೈಕ್ಯರಾದ ಮೇಲೂ ಅಜ್ಜನ ಪವಾಡಗಳು ಕಮ್ಮಿಯಾಗಿಲ್ಲ. ಇಂದಿಗೂ ಗದ್ದುಗೆಗೆ ಬೇಡಿಕೊಂಡು ಕಾಯಿ ಕಟ್ಟಿದರೆ ಭಕ್ತರ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬ ನಂಬಿಕೆಯಿದೆ.
ಮೇಲ್ಛಾವಣಿ ಪವಾಡ
ವೀರಪ್ಪಜ್ಜ ಯಾವಾಗಲೂ ತನ್ನ ಭಕ್ತರು ನೆರಳಿನಲ್ಲಿರಬೇಕು. ತಾನು ಮಾತ್ರ ಮಳೆ, ಬಿಸಿಲು, ಗಾಳಿ, ಚಳಿಗೆ ತೆರೆದುಕೊಂಡಿರಬೇಕೆಂಬ ತತ್ತ್ವವನು. ಇದೇ ಶರಣರ ಗುಣ. ಹೀಗಾಗಿ ಅವನ ಗದ್ದುಗೆಯ ಮೇಲಿನ ಭಾಗವನ್ನು ಗಮನಿಸಿದರೆ ಅದು ತೆರೆದುಕೊಂಡೇ ಇದೆ. ಮಠದ ಉಳಿದ ಭಾಗದಲ್ಲಿ ಭಕ್ತರಿಗೆ ನೆರಳು, ರಕ್ಷಣೆ ನೀಡುವ ಆರ್ಸಿಸಿ ಕಟ್ಟಡವಿದೆ. ಅಜ್ಜನಿಗೂ ರಕ್ಷಣೆ ನೀಡಬೇಕೆಂದು ಅದೆಷ್ಟೇ ಪ್ರಯತ್ನ ಪಟ್ಟರೂ, ಆ ಭಾಗ ಮಾತ್ರ ಪದೆಪದೇ ಕಳಚಿ ಬೀಳುತ್ತಿದ್ದುದನ್ನು ಕಂಡು ಭಕ್ತರು ಇದು ಅಜ್ಜನಿಗೆ ಒಪ್ಪಿಗೆಯಿಲ್ಲವೆಂದು ಸುಮ್ಮನಾಗಿದ್ದಾರೆ.
ಪ್ರತಿ ವರ್ಷದ ಮಾಘ ಶುದ್ಧ ದಶಮಿಯಂದು ಶ್ರೀ ವೀರಪ್ಪಜ್ಜನವರ ಜಾತ್ರಾ ಮಹೋತ್ಸವವು ವಿಜೃಂಭಣೆ, ಸಡಗರ- ಸಂಭ್ರಮಗಳಿಂದ ಜರುಗುತ್ತಿದೆ. ಪ್ರಸಕ್ತ ವರ್ಷ ಫೆ.3ರಂದು ಉಚಿತ ಸಾಮೂಹಿಕ ವಿವಾಹ ಹಾಗೂ ಮಹಾಗಣಾರಾಧನೆ ಜರುಗಲಿದೆ. ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಫೆ.4 ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ, ಫೆ. 5ರಂದು 5 ಗಂಟೆಗೆ ಲಘುರಥೋತ್ಸವ ಜರುಗಲಿದೆ.