ಗೋಣಿಕೊಪ್ಪ: ಹಾತೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಆಯೋಜಿಸಿದ್ದ ‘ಒಕ್ಕಲಿಗರ ಕ್ರೀಡಾ ಕಲರವ’ ಗುರುವಾರ ಮುಕ್ತಾಯಗೊಂಡಿತು.
3 ದಿನ ನಡೆದ ಕಾರ್ಯಕ್ರಮದಲ್ಲಿ ಕ್ರಿಕೆಟ್, ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ಫ್ಯಾನ್ಸಿ ಡ್ರೆಸ್, ಸೂಪರ್ ಸಂಸಾರ, ಬೆಂಕಿ ರಹಿತ ಅಡುಗೆ ಸ್ಪರ್ಧೆಗಳಲ್ಲಿ ಸಮುದಾಯದ ಪುರುಷರು, ಮಹಿಳೆಯರು ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು.
ಮಹಿಳೆಯರ ಹಗ್ಗಜಗ್ಗಾಟದಲ್ಲಿ ಕೋತೂರು ಮಾರಮ್ಮ ತಂಡ ಪ್ರಥಮ, ಕೋಟೆಕೊಪ್ಪ ವೆಂಕಟೇಶ್ವರ ದ್ವಿತೀಯ, ಪುರುಷರ ವಿಭಾಗದಲ್ಲಿ ಕೋತೂರು ಮಾರಮ್ಮ ತಂಡ ಪ್ರಥಮ, ಹಾತೂರು ಜಾಲಿ ಬಾಯ್ಸ ದ್ವಿತಿಯ ಬಹುಮಾನ ಪಡೆದುಕೊಂಡಿತು. ಭಾರದ ಗುಂಡು ಎಸೆತ 45ರ ವಯೋಮಿತಿಯ ಪುರುಷರಲ್ಲಿ ವಿ.ಸಿ.ದಿನೇಶ್(ಪ್ರ), ವಿ.ಬಿ.ವಿಟಲ(ದ್ವಿ), 30ರ ವಯೋಮಿತಿಯಲ್ಲಿ ವಿ.ಎನ್. ಪ್ರಮೋದ್(ಪ್ರ), ವಿ.ಎನ್.ಗೋಪಿ(ದ್ವಿ), ಮಹಿಳೆಯರ ಮುಕ್ತ ವಿಭಾಗದಲ್ಲಿ ಪವಿತ್ರಾ(ಪ್ರ), ವಿ.ಡಿ.ಶ್ವೇತಾ(ದ್ವಿ) ಸ್ಥಾನ ಪಡೆದರು. ದಂಪತಿಗಗೆ ನಡೆದ ಸೂಪರ್ ಸಂಸಾರ ಸ್ಪರ್ಧೆಯಲ್ಲಿ ಮಧುಸೂದನ್-ಶಿಲ್ಪಾ ದಂಪತಿ ಪ್ರಥಮ, ಪ್ರಮೋದ್-ಭವ್ಯ ದಂಪತಿ ದ್ವಿತೀಯ ಸ್ಥಾನ ಪಡೆದರು.
ಟೀಂ ದಕ್ಷಿಣ ಕೊಡಗು ವಿರಾಟ್ ತಂಡ ಚಾಂಪಿಯನ್: ಪುರುಷರಿಗೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಂ ದಕ್ಷಿಣ ಕೊಡಗು ವಿರಾಟ್ ತಂಡವು ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ವಿವೈಸಿ ಕೋಟೆಕೊಪ್ಪ ತಂಡವು ಫೈನಲ್‌ನಲ್ಲಿ ಸೋತು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಒಂಟಿಯಂಗಡಿ ತಂಡವು ಮೂರನೇ ಸ್ಥಾನ ಪಡೆದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಟೀಂ ದಕ್ಷಿಣ ಕೊಡಗು ವಿರಾಟ್ ತಂಡವು ನಿಗದಿತ 6 ಓವರ್‌ಗಳಿಗೆ 2 ವಿಕೆಟ್ ಕಳೆದುಕೊಂಡು 100 ರನ್ ಗುರಿ ನೀಡಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಕೋಟೆಕೊಪ್ಪ 4 ವಿಕೆಟ್ ನಷ್ಟಕ್ಕೆ 31 ರನ್‌ಗಳಷ್ಟೇ ಕಲೆ ಹಾಕಿತು. 70 ರನ್‌ಗಳಿಂದ ಸೋಲನುಭವಿಸಿತು. ವಿಜೇತ ತಂಡದ ಪರ ಸಾಗರ್ 56 ರನ್ ಪೇರಿಸಿದರು. ಕೋಟೆಕೊಪ್ಪ ಮೊದಲ ಎಸೆತದಲ್ಲಿ ವಿಕೆಟ್ ಕಳೆದುಕೊಂಡು ಬೃಹತ್ ಗುರಿಯನ್ನು ಮುಟ್ಟಲು ವಿಫಲವಾಯಿತು. ಸತತ ವಿಕೆಟ್ ಕಳೆದುಕೊಂಡು ಕೊನೇ ಓವರ್‌ಗೆ 70 ರನ್ ಕಲೆ ಹಾಕುವ ಹಂತಕ್ಕೆ ತಲುಪಿ ಸೋಲೊಪ್ಪಿಕೊಂಡಿತು.
ಪ್ರಶಸ್ತಿ: ಕೋಟೆಕೊಪ್ಪ ತಂಡದ ಆಟಗಾರ ಭರತ್ ಸರಣಿ ಶ್ರೇಷ್ಠ, ಬೆಸ್ಟ್ ಬ್ಯಾಟ್ಸ್‌ಮನ್, ಭರವಸೆಯ ಆಟಗಾರ, 23 ಸಿಕ್ಸರ್ ಸಿಡಿಸಿ ಹೆಚ್ಚು ಸಿಕ್ಸರ್ ಭಾರಿಸಿದ ಆಟಗಾರ ಬಹುಮಾನ ದಕ್ಕಿಸಿಕೊಂಡರು. ಟೀಂ ದಕ್ಷಿಣ ಕೊಡಗು ವಿರಾಟ್ ತಂಡದ ಸಾಗರ್‌ಗೌಡ ಪಂದ್ಯ ಶ್ರೇಷ್ಠ, ಕೋಟೆಕೊಪ್ಪ ಭರತ್ ಸರಣಿ ಶ್ರೇಷ್ಠ, ಕೋಟೆಕೊಪ್ಪ ತಂಡದ ಗೋಪಿ ಬೆಸ್ಟ್ ಬೌಲರ್, ಕೈಕೇರಿ ತಂಡದ ವಿಶಾಲ್‌ಗೌಡ ಬೆಸ್ಟ್ ಕ್ಯಾಚರ್ ಬಹುಮಾನ, ಒಂಟಿಯಂಗಡಿ ತಂಡದ ಸೀನಾ ಉತ್ತಮ ಆಲ್‌ರೌಂಡರ್, ಹಿರಿಯ ಆಟಗಾರ ಬಹುಮಾನವನ್ನು ಚೆನ್ನಂಗಿ ತಂಡದ ವಿ.ವಿ ಡಾಲು, ಕಿರಿಯ ಆಟಗಾರ ಬಹುಮಾನವನ್ನು ಕೋಟೆಕೊಪ್ಪ ತಂಡದ ರೋಶನ್, ಹೆಚ್ಚು ಬೌಂಡರಿ (11) ಬಾರಿಸಿದ ಆಟಗಾರನಾಗಿ ಚೆನ್ನಂಗಿ ತಂಡದ ಆದರ್ಶ್, ಉತ್ತಮ್ಮ ತಂಡ ಬಹುಮಾನವನ್ನು ಚೆನ್ನಂಗಿ ಸ್ನೇಹ ಬಳಗ ತಂಡ ಪಡೆದುಕೊಂಡಿತು.
ಸಮಾರೋಪ: ಅಂತಾರಾಷ್ಟ್ರೀಯ ಕ್ರೀಡಾಪಟು ವಿ.ಆರ್.ರಘುನಾಥ್ ಅವರನ್ನು ಸನ್ಮಾನಿಸಲಾಯಿತು. ದಕ್ಷಿಣ ಕೊಡಗು ಯುವ ವೇದಿಕೆ ಅಧ್ಯಕ್ಷ ವಿ.ಪಿ.ಡಾಲು, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ನಿವೃತ್ತ ಪೊಲೀಸ್ ಅಧಿಕಾರಿ ಕೆ. ಅರ್ಕೇಶ್, ಹೈಕೋರ್ಟ್ ವಕೀಲ ಎಚ್.ಸಿ.ಶರತ್‌ಚಂದ್ರ, ಶಿಕ್ಷಕಿ ಚಂದನಾ ಮಂಜುನಾಥ್, ದಾನಿ ವಿ.ಡಿ.ನಿಂಗಪ್ಪ, ವಿ.ಕೆ.ಉದಯ್ ಇತರರಿದ್ದರು.