ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಾಲು ಒಕ್ಕೂಟದ ರಚನೆಯ ಭಿನ್ನಾಭಿಪ್ರಾಯದ ಹಗ್ಗ ಜಗ್ಗಾಟ ದೊಡ್ಡ ಸದ್ದು ಮಾಡಿತ್ತು. ಆದರೂ ರಾಜ್ಯ ಸರ್ಕಾರ ಚಿಮುಲ್ ಒಕ್ಕೂಟವನ್ನು ರಚಿಸಿ ಆಡಳಿತಾಧಿಕಾರಿಯನ್ನು ಗುರುವಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಒಕ್ಕೂಟ ರಚನೆಯ ಕೊಡುಗೆ ಲಾಭ ಬೇರೆಯವರಿಗೆ ಲಭಿಸುವಿಕೆ ಲೆಕ್ಕಾಚಾರದಲ್ಲಿ ವಿರೋಧ, ಆತುರ ನಿರ್ಧಾರ ಕೈಗೊಳ್ಳದಂತೆ ಸರ್ಕಾರದ ಬಳಿಗೆ ಶಾಸಕರ ನಿಯೋಗ, ಕೆಲ ನಿರ್ದೇಶಕರ ಬಹಿರಂಗ ಅಪಸ್ವರ, ನ್ಯಾಯಾಲಯದ ಕದ ತಟ್ಟುವಿಕೆ, ಸ್ವಪಕ್ಷಪಾತ ಧೋರಣೆ ಪ್ರದರ್ಶನ ಸೇರಿ ಅಡ್ಡಿ ಆತಂಕ ವಿಘ್ನಗಳು ಎದುರಾಗಿದ್ದವು. ಇದರ ನಡುವೆ ಪ್ರತಿಷ್ಠೆಯಾಗಿ ತೆಗೆದುಕೊಂಡ ಸಚಿವ ಡಾ. ಕೆ.ಸುಧಾಕರ್ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪ್ರತ್ಯೇಕ ಒಕ್ಕೂಟ ರಚಿಸಿ ಆದೇಶ ಹೊರಡಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯು ರಚನೆಯಾದ ಬಳಿಕ ಪ್ರತ್ಯೇಕ ಹಾಲು ಒಕ್ಕೂಟ ಮತ್ತು ಸಹಕಾರ ಬ್ಯಾಂಕ್ ಕಾರ್ಯಾರಂಭದ ಕೂಗು ಕೇಳಿ ಬಂದಿತ್ತು. 2016ರ ಸೆ.23ರಂದು ನಡೆದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಕೋಚಿಮುಲ್ ವಿಭಜನೆಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎನ್.ಎಚ್.ಶಿವಶಂಕರರೆಡ್ಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರು. ಆದರೆ, ಕರೊನಾ ಸೇರಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿತ್ತು, ಮತ್ತೆ ಡಾ.ಕೆ.ಸುಧಾಕರ್ ಸಚಿವರಾಗುತ್ತಿದ್ದಂತೆ ಬಿರುಸು ಪಡೆಯಿತು. ಇದರ ಸಾಧಕ ಬಾಧಕಗಳ ಚರ್ಚೆಯ ನಡುವೆ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂತಿಮವಾಗಿ ಘೋಷಿಸಲಾಯಿತು. ಹಾಗೆಯೇ ಈ ಸಂಬಂಧ ಸಲ್ಲಿಸಲು ಸೂಚಿಸಿದ್ದ ಸಾಧ್ಯತಾ ವರದಿಯಿಂದಲೂ ಹೊಸ ತೀರ್ಮಾನದಿಂದ ಅನುಕೂಲ ಎಂಬುದಾಗಿ ಹೇಳಲಾಗಿದೆ.
ಇದೇ ವೇಳೆ ರಮೇಶ್ ಕುಮಾರ್, ಕೆ.ವೈ.ನಂಜೇಗೌಡ, ಎನ್.ಎಚ್.ಶಿವಶಂಕರರೆಡ್ಡಿ ಸೇರಿ ಅವಿಭಜಿತ ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಒಕ್ಕೂಟದ ಕೆಲ ನಿರ್ದೇಶಕರ ಜತೆಗೆ ಕೆಲವರು, ಇದು ಕೋಚಿಮುಲ್ ಪ್ರತ್ಯೇಕತೆಗೆ ಸಂಬಂಧಿಸಿದಂತೆ ಸಕಾಲ ಅಲ್ಲ ಎಂಬುದಾಗಿ ಹೇಳುತ್ತಿದ್ದರೆ, ಶತಾಯ ಗತಾಯ ಚಿಮುಲ್ ರಚನೆಯಾಗಬೇಕು ಎಂಬುದಾಗಿ ಸಚಿವ ಡಾ ಕೆ.ಸುಧಾಕರ್ ಪಟ್ಟು ಹಿಡಿದಿದ್ದರು. ಇನ್ನು ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳ ಪ್ರತಿಷ್ಠೆಯ ವಿಚಾರವಾಗಿ ಪರಿವರ್ತನೆಯಾಗಿರುವ ಕೋಚಿಮುಲ್ ಇಬ್ಭಾಗದ ವಿಚಾರವು ನ್ಯಾಯಾಲಯದ ಮೆಟ್ಟಿಲೇರಿತು. ಇದು ಪ್ರಭಾವಿಗಳ ಹುನ್ನಾರದ ಹೆಸರಿನಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿತ್ತು.
ಒಕ್ಕೂಟದ ಅಂಕಿ -ಅಂಶ
ನೂತನ ಒಕ್ಕೂಟ ವ್ಯಾಪ್ತಿಯಲ್ಲಿ 75 ಎಂಪಿಸಿಎಸ್ ಡೈರಿಗಳಿದ್ದು, 51,357 ಸಣ್ಣ ರೈತರು, 53,377 ಅತಿ ಸಣ್ಣ ರೈತರು ಹಾಗೂ 26,670 ಕೃಷಿ ಕಾರ್ಮಿಕರು ಸೇರಿ 1.51,836 ಸದಸ್ಯರಿದ್ದಾರೆ. ಒಕ್ಕೂಟದಲ್ಲಿ ಪ್ರತಿನಿತ್ಯ ಸರಾಸರಿ 4.5 ಲಕ್ಷ ಲೀಟರ್ ನಷ್ಟು ಹಾಲು ಸಂಗ್ರಹವಾಗುತ್ತಿದೆ. ಇನ್ನು ಜಿಲ್ಲೆಯಲ್ಲಿ ಪ್ರತಿನಿತ್ಯ ಪಿಎಂಸಿ 19ರ ಮಾರ್ಗದಲ್ಲಿ 2.7 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಅದರಲ್ಲಿ 1.5 ಲಕ್ಷ ಲೀಟರ್ ಯುಎಸ್‌ಟಿ ಉತ್ಪನ್ನಕ್ಕೆ ಹಾಗೂ 3 ತಿಂಗಳವರೆಗೂ ಸಂರಕ್ಷಿಸಬಹುದಾದ ಪ್ಲೇಕ್ಸಿ ಹಾಲಿನ ಉತ್ಪನ್ನಕ್ಕೆ 50 ಸಾವಿರ ಲೀಟರ್ ಅನ್ನು ಬಳಸಿಕೊಳ್ಳಲಾಗುತ್ತದೆ. 5 ಟನ್ ಸಾಮರ್ಥ್ಯದ ಬೆಣ್ಣೆ ಮತ್ತು ತುಪ್ಪ ಉತ್ಪಾದನಾ ಘಟಕವಿದೆ. ಸರಾಸರಿ 450 ಟನ್ ತುಪ್ಪವನ್ನು ಉತ್ಪಾದನೆ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ನಿರ್ಮಿಸುತ್ತಿರುವ ಶೀತಲ ಘಟಕಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಜಿಲ್ಲಾಧಿಕಾರಿ ಆರ್.ಲತಾ ಅಧಿಕಾರ ಸ್ವೀಕಾರ
ತಾಲೂಕಿನ ನಂದಿ ಕ್ರಾಸ್‌ನಲ್ಲಿರುವ ಮೆಗಾ ಡೈರಿಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು ನೂತನವಾಗಿ ರಚನೆಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತಾಧಿ ಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಜಿಲ್ಲೆಯಲ್ಲಿ ಚಿಮುಲ್ ಸ್ಥಾಪನೆ ಐತಿಹಾಸಿಕ ಮೈಲಿಗಲ್ಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಹಾಲು ಸಂಗ್ರಹಣೆ ಘಟಕ, ಪ್ರಯೋಗಾಲಯ, ಪ್ಯಾಕಿಂಗ್ ಘಟಕ, ಬೆಣ್ಣೆ ಹಾಗೂ ತುಪ್ಪ ತಯಾರಿಸುವ ಘಟಕ ಸೇರಿ ವಿವಿಧ ಘಟಕಗಳನ್ನು ವೀಕ್ಷಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದರು. ಮೆಗಾ ಡೈರಿಯ ಪ್ರಧಾನ ವ್ಯವಸ್ಥಾಪಕಿ ಜಿ.ಬಿ.ವಿಜಯಲಕ್ಷ್ಮೀ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಜಿ.ಬಿ.ಮಂಜುಳಾ, ಮೆಗಾ ಡೈರಿಯ ಸಹಾಯಕ ವ್ಯವಸ್ಥಾಪಕ ಜಿ.ಎಲ್.ಅಶ್ವತ್ಥನಾರಾಯಣ, ಎಂ.ಕೆ.ಉಮ, ನಟರಾಜು, ಮಾರುಕಟ್ಟೆ ಅಧೀಕ್ಷಕ ಎಸ್.ಎಲ್.ಮಧುಸೂದನ್ ರೆಡ್ಡಿ, ಆಡಳಿತ ಅಧೀಕ್ಷಕ ರಮೇಶ್ ಬಾಬು ಮತ್ತಿತರರು ಇದ್ದರು.
ಒಕ್ಕೂಟ ಕಾರ್ಯಾರಂಭ ಆಡಳಿತಾಧಿಕಾರಿ ನೇಮಕದೊಂದಿಗೆ ಈ ಭಾಗದ ಜನರ ಪ್ರಮುಖ ಬೇಡಿಕೆಯಾದ ಚಿಮುಲ್ ಪ್ರತ್ಯೇಕ ಒಕ್ಕೂಟ ಗುರುವಾರ ಅಧಿಕೃತವಾಗಿ ಕಾರ್ಯಾರಂಭವಾಗಿದೆ. ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾಧಿಕಾರಿ ಆರ್.ಲತಾ ಅವರನ್ನು ಒಕ್ಕೂಟದ ಆಡಳಿತಾಧಿಕಾರಿಯನ್ನಾಗಿ ನೇಮಿಸಿ, ಸಹಕಾರ ಸಂಘಟಗಳ ಜಂಟಿ ನಿಬಂಧಕ ಅಶ್ವತ್ಥನಾರಾಯಣ್ ಆದೇಶ ಹೊರಡಿಸಿದ್ದಾರೆ. ಕೋಲಾರ ಹಾಲು ಒಕ್ಕೂಟವನ್ನು ವಿಭಜಿಸಿ, ಪ್ರತ್ಯೇಕ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚಿಸುವಂತೆ ಒತ್ತಾಯ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ, ಆಡಳಿತಾತ್ಮಕ ವಿಚಾರಗಳನ್ನು ಚರ್ಚಿಸಲಾಗಿದೆ. ಇದೀಗ ಆಡಳಿತಾಧಿಕಾರಿ ಜವಾಬ್ದಾರಿ ವಹಿಸುವುದ ರೊಂದಿಗೆ ಒಕ್ಕೂಟ ಕಾರ್ಯಾರಂಭ ಅಧಿಕೃತಗೊಂಡಿದ್ದು, ಈ ಭಾಗದ ಜನರ 16 ವರ್ಷಗಳ ಕನಸು ನನಸಾಗಿದೆ. ಒಕ್ಕೂಟದ ಹಿನ್ನೆಲೆ ಮೊದಲಿಗೆ ಅವಿಭಜಿತ ಕೋಲಾರ ಜಿಲ್ಲೆ ವ್ಯಾಪ್ತಿಯಲ್ಲಿ ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘಗಳ ಒಕ್ಕೂಟ ರಚನೆಯಾಗಿದ್ದು, ಬಳಿಕ 2008ರಲ್ಲಿ ಚಿಕ್ಕಬಳ್ಳಾಪುರ ರಚನೆಯೊಂದಿಗೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಎಂಬುದಾಗಿ ಬದಲಾಯಿಸಲಾಗಿತ್ತು. ಇದೀಗ ಪ್ರತ್ಯೇಕ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ರಚನೆಯಾಗಿದೆ. ಇದರ ಆಡಳಿತ ಮಂಡಳಿಗೆ ಚುನಾವಣೆ ನಡೆದು, ಹೊಸ ಕೌನ್ಸಿಲ್ ಅಸ್ತಿತ್ವಕ್ಕೆ ಬರುವವರೆಗೂ ಡಿಸಿ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಇನ್ನು ಮೂರು ತಿಂಗಳೊಳಗೆ ಚುನಾವಣೆ ನಡೆಸಿ, ಹೊಸ ಆಡಳಿತ ಮಂಡಳಿ ರಚನೆಗೆ ಜಿಲ್ಲಾಡಳಿತ ಮುಂದಾಗಿದೆ.
ಈ ಹಿಂದೆಯೇ ಚಿಮುಲ್ ರಚನೆಯಾಗಬೇಕಾಗಿತ್ತು. ಆದರೆ, ಕೋಚಿಮುಲ್ ವಿಭಜನೆಗೆ ಕೋಲಾರ ಮೂಲದ ಹಿರಿಯ ರಾಜಕಾರಣಿಯೊಬ್ಬರ ವೈಯಕ್ತಿಕ ಮತ್ತು ರಾಜಕೀಯ ಲಾಭದ ಲೆಕ್ಕಾಚಾರದ ಹಿನ್ನೆಲೆಯಲ್ಲಿ ವಿಳಂಬವಾಯಿತು. ರಾಜಕಾರಣಿಯ ಮೇಲಾಟಕ್ಕೆ ತಡೆಯೊಡ್ಡಿದ ರಾಜ್ಯ ಸರ್ಕಾರವು, ಒಕ್ಕೂಟ ರಚನೆಯ ಮೂಲಕ ರೈತಪರ ಕಾಳಜಿಯನ್ನು ಪ್ರದರ್ಶಿಸಿದೆ. - ಡಾ ಕೆ.ಸುಧಾಕರ್ ಆರೋಗ್ಯ ಸಚಿವ ಚಿಮುಲ್ ರಚನೆಯು ಮತ್ತು ಆಡಳಿತಾಧಿಕಾರಿ ನೇಮಕವು ಸಂತಸದ ವಿಚಾರ. ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬರು ಹಾಲು ಒಕ್ಕೂಟದ ಉನ್ನತಿಗೆ ಕೈ ಜೋಡಿಸಬೇಕು. ಇನ್ನು ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿಯೇ ಒಕ್ಕೂಟವು ಅಭಿವೃದ್ಧಿಯಲ್ಲಿ ಮೊದಲನೇ ಸ್ಥಾನಕ್ಕೇರುವುದರಲ್ಲಿ ಯಾವುದೇ ಸಂಶಯ ಬೇಡ. ಸಚಿವ ಸುಧಾಕರ್ ಒತ್ತಡದ ಹಿನ್ನೆಲೆಯಲ್ಲಿ ಕೆಲವರ ವಿರೋಧದ ನಡುವೆಯೂ ಒಕ್ಕೂಟದ ಪ್ರತ್ಯೇಕತೆಯ ಕನಸು ನನಸಾಗಿದೆ. - ಕೆ.ವಿ.ನಾಗರಾಜ್ ಕೋಚಿಮುಲ್ ಮಾಜಿ ನಿರ್ದೇಶಕ