ಜಿಲ್ಲೆ

ಹಗರೆ ಗ್ರಾಪಂಗೆ ತಾಯಿಮುದ್ದು ಕೃಷ್ಣಪ್ಪ ಅಧ್ಯಕ್ಷೆ

ಹಗರೆ: ಮಾದೀಹಳ್ಳಿ ಹೋಬಳಿ ಹಗರೆ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಸಿಳ್ಳೆಕ್ಯಾತ ಜನಾಂಗದ ತಾಯಿಮುದ್ದು ಕೃಷ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಂದು ತಿಂಗಳ ಹಿಂದೆ ತೆರವಾಗಿದ್ದ ಹಗರೆ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಸಲಾಯಿತು. ಒಟ್ಟು 20 ಸದಸ್ಯರಿರುವ ಗ್ರಾಮ ಪಂಚಾಯಿತಿಯಲ್ಲಿ ತಾಯಿಮುದ್ದು ಕೃಷ್ಣ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವರನ್ನುಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ವಸಂತಕುಮಾರ್ ಘೋಷಿಸಿದರು. ಈ ಚುನಾವಣೆ ಪ್ರಕ್ರಿಯೆಯಲ್ಲಿ ಗ್ರಾಪಂನ 12 ಸದಸ್ಯರು ಮಾತ್ರ ಭಾಗವಹಿಸಿದ್ದರು.

ನೂತನ ಅಧ್ಯಕ್ಷರಿಗೆ ಶುಭ ಕೋರಿ ಮಾತನಾಡಿದ ತಾಲೂಕು ಬಿಜೆಪಿ ಮುಖಂಡ ಡಿ.ಶಾಂತಕುಮಾರ್, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ದೊರೆಯಬೇಕು ಎಂಬುದು ಅಂಬೇಡ್ಕರ್ ಅವರ ಕನಸು. ಅದರಂತೆ ಇಂದು ಹಗರೆ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರಾಗಿರುವ ಬುಡಕಟ್ಟು ಜನಾಂಗದ ಸಿಳ್ಳೆಕ್ಯಾತ ಸಮುದಾಯದ ಮಹಿಳೆ ತಾಯಿಮುದ್ದು ಕೃಷ್ಣಪ್ಪ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರು.

ಚುನಾವಣಾಧಿಕಾರಿಯಾಗಿ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೋಳೆಯಯ್ಯ ಇದ್ದರು.

ನೂತನ ಅಧ್ಯಕ್ಷರಿಗೆ ಸದಸ್ಯರಾದ ಮಂಜುನಾಥ್, ಪ್ರಭಾ ಮಹೇಶ್, ಪುಷ್ಪಾ ಹರೀಶ್, ಜಯಮ್ಮ ರಾಜ್ ಕುಮಾರ್, ಪಾಮತಿ ಅನಿಲ್, ಲಕ್ಷ್ಮಮ್ಮ , ಸವಾಸಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶೇಖರ್ ಗೌಡ, ಹಗರೆ ಕೃಷಿಪತ್ತಿನ ಸಹಕಾರ ಸಂಘದ ಸದಸ್ಯ ಸಂಕೇತ್, ಬಿಜೆಪಿ ಮುಖಂಡರಾದ ರಘು, ಗೋಪಿ, ಶ್ರೀನಿವಾಸ್, ಇಂತಿಯಾಸ್ ಖಾನ್, ದರ್ಶನ್, ನವೀನ್ ಇತರರು ಇದ್ದರು.