ಸಾಗರ: ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ಅರಣ್ಯಭೂಮಿ ವಾಸಿಗಳು ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿ ಮತ್ತು ವಾಸದ ಮನೆಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಸೋಮವಾರ ಮಲೆನಾಡು ರೈತರ ಹೋರಾಟ ಸಮಿತಿಯಿಂದ ಉಪವಿಭಾಗಾಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ಅರಣ್ಯಭೂಮಿ ಸಾಗುವಳಿದಾರರ ಪ್ರಾಮಾಣಿಕ ಬೇಡಿಕೆ ಮುಂದಿನ 15 ದಿನಗಳಲ್ಲಿ ಈಡೇರಿಸದಿದ್ದರೆ ಯಡಿಯೂರಪ್ಪ, ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಗೋಪಾಲಕೃಷ್ಣ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಎಚ್ಚರಿಸಿದರು.
ರಾಜ್ಯದಲ್ಲಿ ರೈತರ ಮಾತಿಗೆ ಕವಡೆ ಕಿಮ್ಮತ್ತು ಇಲ್ಲದಂತಾಗಿದೆ. ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದೆ ಎಂದು ಪೂಜೆ ಮಾಡಲು ಬಂದಿದ್ದ ಸಚಿವರು, ಶಾಸಕರಿಗೆ ಡ್ಯಾಂ ನಿರ್ಮಾಣಕ್ಕಾಗಿ ಸರ್ವಸ್ವವನ್ನೂ ಕಳೆದುಕೊಂಡು ಅತಂತ್ರರಾದ ರೈತರ ಕಷ್ಟ ಅರ್ಥವಾಗದಿರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರು, ಅರಣ್ಯಭೂಮಿ ಸಾಗುವಳಿದಾರರ ಬೇಡಿಕೆ ಈಡೇರಿಸಲು ದೇಶದ ಪ್ರಧಾನಿ, ಮುಖ್ಯಮಂತ್ರಿಗಳು, ರಾಜ್ಯದ ಪ್ರಧಾನ ಕಾರ್ಯದರ್ಶಿ, ಜಿಲ್ಲಾಕಾರಿಗಳು, ಉಪವಿಭಾಗಾಕಾರಿಗಳಿಗೆ ಅನೇಕ ಬಾರಿ ಮನವಿ ನೀಡಲಾಗಿದೆ. ಪ್ರಧಾನ ಮಂತ್ರಿಗಳ ಕಚೇರಿಯಿಂದ ಸಮಸ್ಯೆ ಇತ್ಯರ್ಥಪಡಿಸಿ ಎಂದು ಬಂದ ಪತ್ರವನ್ನೇ ರಾಜ್ಯ ಸರ್ಕಾರ ಕಸದ ಬುಟ್ಟಿಗೆ ಎಸೆದು ಕುಳಿತಿದೆ. ಸುಪ್ರೀಂ ಕೋರ್ಟ್ 2025ರ ಜ.20ರ ಒಳಗೆ ಮುಳುಗಡೆ ಸಂತ್ರಸ್ತರ ಸಮಸ್ಯೆಗೊಂದು ಪರಿಹಾರ ಕಲ್ಪಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಆರು ತಿಂಗಳಾದರೂ ನ್ಯಾಯಾಲಯದ ಆದೇಶ ಪಾಲನೆಯಾಗಿಲ್ಲ ಎಂದು ದೂರಿದರು.
ದಿನೇಶ್, ಅಶೋಕ್, ಪರಶುರಾಮ ಶಿಡ್ಡಿಹಳ್ಳಿ, ಸರ್ವೋತ್ತಮ, ಮಂಜುನಾಥ, ಕೃಷ್ಣಪ್ಪ, ನಾಗರಾಜ, ಮಂಜಪ್ಪ, ಪುಟ್ಟಸ್ವಾಮಿ, ಮೋಹನ್, ಎಚ್.ಬಿ.ರಾಜಪ್ಪ, ಸುಗಂಧರಾಜ, ಸುರೇಶ್, ರಾಘವೇಂದ್ರ, ಶೇಖರಪ್ಪ ಇತರರಿದ್ದರು.