ಜಿಲ್ಲೆ

ಹಕ್ಕುಪತ್ರಕ್ಕಾಗಿ ಆಗ್ರಹ, 37ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

ಮೈಸೂರು; ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿರುವವರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಏಕಲವ್ಯನಗರದ ನಿವಾಸಿಗಳು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆಸುತ್ತಿರುವ ಪ್ರತಿಭಟನೆ ಸೋಮವಾರಕ್ಕೆ 36 ದಿನಗಳು ಪೂರೈಸಿದೆ.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಧರಣಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರರು ಪಾಲ್ಗೊಂಡು ಬೆಂಬಲ ಸೂಚಿಸಿದರು.
ಅಲೆಮಾರಿಗಳಾಗಿ ಜೀವನ ಸಾಗಿಸುತ್ತಿದ್ದ ನಮ್ಮನ್ನು ನೆಲೆ ಇಲ್ಲದಂತೆ ಮಾಡಲಾಗಿದೆ. ಪದೇ ಪದೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸಿದರು. ಬಳಿಕ ಅಧಿಕಾರಿಗಳು ತೋರಿದ ಏಕಲವ್ಯನಗರ ಜಾಗದಲ್ಲಿಯೇ ಜೀವನ ನಡೆಸುತ್ತಿದ್ದೇವೆ. ಅಲ್ಲೂ ನಮ್ಮನ್ನು ಒಕ್ಕೆಲೆಬ್ಬಿಸಿದರೆ ಎಲ್ಲಿಗೆ ಹೋಗಬೇಕು ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.


ಅಲೆಮಾರಿ ಜನರು ವಾಸಿಸುತ್ತಿರುವ ಜಾಗವು ಸರ್ಕಾರಿ ಭೂಮಿಯಾಗಿದ್ದು, ಅಕ್ರಮ-ಸಕ್ರಮ ಯೋಜನೆಯಲ್ಲಿ ಏಕಲವ್ಯನಗರ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.


ಸಮಾಜವಾದಿ ಹೋರಾಟಗಾರ ಪ. ಮಲ್ಲೇಶ್, ರಾಜ್ಯ ರೈತ ಸಂಘದ ಮುಖಂಡರಾದ ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್, ಬೊಕ್ಕಹಳ್ಳಿ ನಂಜುಂಡಸ್ವಾಮಿ, ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮೊದಲಾದವರು ಇದ್ದರು.