ಹುಬ್ಬಳ್ಳಿ: ವಾಸದ ಮನೆಯ ಶಾಶ್ವತ ಹಕ್ಕು ಪತ್ರ ಹಾಗೂ ಶುದ್ಧ ಕ್ರಯ ಪತ್ರ ನೀಡಿ ಹುಬ್ಬಳ್ಳಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಡಬೇಕೆಂದು ಆಗ್ರಹಿಸಿ ಗಿರಣಿಚಾಳ ನಿವಾಸಿಗಳು ಹುಬ್ಬಳ್ಳಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಮಸ್ತ ಗಿರಣಿಚಾಳ ನಿವಾಸಿಗಳ ಸಂಘದ ಅಧ್ಯಕ್ಷ ಮೋಹನ ಹಿರೇಮನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಗಿರಣಿಚಾಳ ಪ್ರದೇಶವು ಕೊಳೆಗೇರಿ ಎಂದು ಸರ್ಕಾರದಿಂದ ಘೊಷಿಸಲ್ಪಟ್ಟಿದೆ. ಸಿಟಿಎಸ್ ಸಂಖ್ಯೆ 211ಎಬಿಸಿ, 212ರಿಂದ 468ರಲ್ಲಿನ 7 ಎಕರೆ 28 ಗುಂಟೆಯು ರಾಜ್ಯ ಸರ್ಕಾರದ ಆಸ್ತಿಯೆಂದು ಕಾನೂನಾತ್ಮಕವಾಗಿ ರಾಜ್ಯಪತ್ರ (ಗೆಜೆಟ್) ದಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಈ ಹಿಂದೆ ನಿವಾಸಿಗಳಿಗೆ ಮನೆಯ ಸ್ವಾಧೀನ ಪತ್ರ ಹಾಗೂ ನಿವೇಶನದ ಹಕ್ಕು ಪತ್ರ ನೀಡಲಾಗಿದೆ. ಶಾಶ್ವತ ಮಾಲೀಕತ್ವದ ಹಕ್ಕು ಪತ್ರ ಅವಶ್ಯವಿರುತ್ತದೆ ಎಂದು ಸಂಘ ಆಗ್ರಹಿಸಿದೆ.
ಇಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಶುದ್ಧ ಕ್ರಯ ಪತ್ರ ನೀಡಿದರೆ ಮನೆಯ ಮಾಲೀಕತ್ವ ಹೊಂದಲು ಸಹಕಾರಿಯಾಗುತ್ತದೆ ಎಂದು ಹೇಳಿದೆ.