ಜಿಲ್ಲೆ

ಹಕ್ಕು ಚ್ಯುತಿ ಮಂಡಿಸು ಪರಿಷತ್ ನಲ್ಲೆ ನಿನ್ನ ಬಗ್ಗೆ ಹೇಳುವೆ

ಸಂತೋಷ ದೇಶಪಾಂಡೆ

ಬಾಗಲಕೋಟೆ: ತಮ್ಮ ವಿರುದ್ಧ ಮಾನನಷ್ಟು ಮೊಕದ್ದಮೆ ಹೂಡುವ ಎಚ್ಚರಿಕೆಗೆ ಮೊದಲು ಆ ಕೆಲಸ ಮಾಡು ಎಂದಿದ್ದ ಮಾಜಿ ಶಾಸಕ ವೀರಣ್ಣ ಚರಂತಿಮಠ ಇದೀಗ ತಮಗೆ ಹಕ್ಕು ಚ್ಯುತಿ ಬಗ್ಗೆ ಗೊತ್ತಿಲ್ಲ ಎಂದು ಜರಿದಿದ್ದ ಪಿ,.ಎಚ್.ಪೂಜಾರ ಅವರ ಹೇಳಿಕೆಗೆ ಅದನ್ನು ಹಾಕು ಪರಿಷತ್ತಿಗೆ ಬಂದು ನಿನ್ನ ಬಗ್ಗೆ ಎಲ್ಲವನ್ನು ಮಾತನಾಡುತ್ತೇನೆ ಎಂದು ಪಾಟೀ ಸವಾಲು ಎಸೆದಿದ್ದಾರೆ.

ಕಳೆದೊಂದು ವಾರದಿಂದ ಬಿಜೆಪಿ ಎಂಎಲ್ಸಿ ಪಿ.ಎಚ್.ಪೂಜಾರ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ ನಡುವೆ ನಡೆದಿರುವ ವಾಕ್ ಟಾಕ್ ಗೆ ಮುಂದುವರೆದು ಬುಧವಾರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ವಿರುದ್ಧ ಚರಂತಿಮಠ ಮತ್ತೆ ಏಕವಚನದಲ್ಲೆ ವಾಗ್ಬಾಣ ಬಿಟ್ಟರು.
ಬಾಗಲಕೋಟೆ ಕ್ಷೇತ್ರದಲ್ಲಿ ನಮ್ಮಿಬ್ಬರಲ್ಲಿ ಯಾರು ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎನ್ನುವುದು ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಬಹಿರಂಗ ಚರ್ಚೆಗೆ ನಾನು ರೆಡಿ ಇದ್ದೇನೆ. ಇದೇ ಪ್ರೆಸ್ ಕ್ಲಬ್ ನಲ್ಲಿ ಅದು ಆಗಿ ಹೋಗಲಿ ಎಂದರು.

ಬಿವಿವಿ ಸಂಘ ಬಿಟ್ಟು ರಾಜಕಾರಣ ಮಾಡು ಎಂದು ಹೇಳಲು ಪಿ.ಎಚ್.ಪೂಜಾರ ಯಾರು? ನೀನೇನಾದರೂ ನನ್ನ ಚೇರ್ಮನ್ ಮಾಡಿದ್ದಿಯಾ? ಕೆಎಲ್‌ಇ, ಬಿಎಲ್‌ಡಿ, ಕಲಬುರಗಿ, ಡಾವಣಗೇರಿ ಹೀಗೆ ಅನೇಕ ಸಂಘ-ಸಂಸ್ಥೆಗಳ ಚೇರ್ಮನ್ನರೆಲ್ಲ ರಾಜಕಾರಣದಲ್ಲಿ ಇದ್ದಾರೆ. ೪೦ ಶಿಕ್ಷಣ ಸಂಸ್ಥೆ ಇದ್ದ ಬಿವಿವಿ ಸಂಘಕ್ಕೆ ನಾನು ಚೇರ್ಮನ್ ಆದ ಬಳಿಕ ೧೩೦ಕ್ಕೆ ಏರಿಕೆ ಆಗಿವೆ. ಇಂತಹ ಒಂದು ಸಂಸ್ಥೆಗೆ ಹಂಚಿಕೆ ಆಗಿದ್ದ ಜಾಗಕ್ಕೆ ಕಲ್ಲು ಹಾಕಿದ್ದು ನೀನು ಎಂದು ಎಂಎಲ್ಸಿ ಅವರಿಗೆ ಚುಚ್ಚಿದರು.

ರೋಡ್ ಲೈಟ್ ಬಿಟ್ಟು ಉದ್ಯೋಗ ಕಲ್ಪಿಸಲು ಯಾವುದೇ ಕೆಲಸ ಮಾಡಿಲ್ಲ ಎನ್ನುವ ಆರೋಪಕ್ಕೆ, ೩೦ ಸಾವಿರ ಕೋಟಿ ರೂ. ಬಂಡವಾಳ ಹಾಕಿ ಕಾರ್ಖಾನೆ ಸ್ಥಾಪಿಸಲು ಉದ್ಯಮೆದಾರರು ಬಂದಾಗ ಇದೇ ನಿಮ್ಮ ಆಪ್ತ ಶಾಸಕರಾದ ಎಚ್.ವೈ.ಮೇಟಿ ಅವರು ರೈತರನ್ನು ಎತ್ತಿಕಟ್ಟಿ ಭೂಮಿ ಕೊಡದಂತೆ ಮಾಡಿದ್ದರು. ಹೀಗಾಗಿ ಫ್ಯಾಕ್ಟರಿ ಇಲ್ಲಿ ಆಗಲಿಲ್ಲ. ಆದರೆ, ಸಾವಿರಾರು ಜನರಿಗೆ ಉದ್ಯೋಗ ಕೊಡುವ ತೋ. ವಿವಿ ತಂದೆ. ಸರ್ಕಾರಿ ಕಾಲೇಜ್, ಪಾಲಿಟೆಕ್ನಿಕ್, ಹೈಸ್ಕೂಲ್ ಸೇರಿ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಮಾಡಿದ್ದೇನೆ. ಅಭಿವೃದ್ಧಿ ಕಾರ್ಯಗಳ ಪಟ್ಟಿ ಕೊಡುವೆ ನೋಡಿಕೊಳ್ಳಿ ಎಂದರು.

೧೯೯೬ರಲ್ಲಿ ಎಂಪಿ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ ಬಳಿಕ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಗೆಲ್ಲುವ ವೇದಿಕೆ ಸೃಷ್ಟಿಯಾಯಿತು. ಹೀಗಾಗಿ ವಿಧಾನಸಭೆಗೆ ಟಿಕೆಟ್ ಕೇಳಿದ್ದೆ. ಹಿರಿಯರು ನಿನಗೆ ಬಿಟ್ಟುಕೊಡು ಎಂದಿದ್ದಕ್ಕೆ ಒಪ್ಪಿ, ನಿನ್ನ ಪರವಾಗಿ ಚುನಾವಣೆ ಮಾಡಿದೇವು. ಆಗ ಬಿಜೆಪಿ ಸಾಂಪ್ರದಾಯಿಕ ಮತಗಳ ಜೊತೆಗೆ ಎಲ್ಲ ಲಿಂಗಾಯತರು ಮತ್ತು ಇತರೆ ಸಮುದಾಯಗಳ ಮತಗಳನ್ನು ಕ್ರೋಢೀಕರಿಸಿ ನಿನ್ನಿ ಗೆಲ್ಲಿಸಿದ್ದೇವೆ. ನಾನು ಇರದೇ ಇದ್ದಿದ್ದರೆ ನೀನು ಈ ವರೆಗೂ ವಿಧಾನಸೌಧ ನೋಡುತ್ತಿರರಲಿಲ್ಲ ಎಂದು ಚುಚ್ಚಿದರು.

ನಾನು ಶಾಸಕ ಇದ್ದಾಗ ಬೆಳಗ್ಗೆ ನಗರಸಭೆ, ಬುಡಾ, ಬಿಟಿಡಿಎ ಸಭೆ ಮುಗಿಸಿ ಮಧ್ಯಾಹ್ನ ಒಂದು ಗಂಟೆಗೆ ನಮ್ಮ ಸಂಘದ ಕೆಲಸಕ್ಕೆ ಇರುತ್ತಿದ್ದೆ. ಎಷ್ಟು ಇರುತ್ತೆ ಅಷ್ಟೆಕ್ಕೆ ಮಾತ್ರ ಸಭೆ ನಿಗದಿ ಇರಬೇಕು. ನಿನ್ನಂತೆ ನಾನು ಖಾಲಿ ಇಲ್ಲ. ನಾನು ಉದ್ಯೋಗಿತ ರಾಜಕಾರಣಿ, ನೀನು ನಿರುದ್ಯೋಗಿ ರಾಜಕಾರಣಿ. ಒಂದು ಸಂಸ್ಥೆ ಕಟ್ಟಿಲ್ಲ, ಯಾವುದೇ ಉದ್ಯೋಗ ಇಲ್ಲ, ಪಂಜಾರಪೋಳ ಮಾಡಿ ಒಂದು ಆಕಳು ಸಾಕಿಲ್ಲ. ಇಡೀ ದಿನ ಸಭೆ ಮಾಡುತ್ತ ಬಂದಿದ್ದಿ ಯಾವುದೇ ಸಮಾಜ ಸೇವೆಯೂ ನಿನ್ನಿಂದ ಆಗಿಲ್ಲ ಎಂದು ದೂರಿದರು.

ಬಾಗಲಕೋಟೆ ಪ್ರೆಸ್ ಕ್ಲಬ್ ನಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿದರು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಶಿವಾನಂದ ಟವಳಿ, ರಾಜು ನಾಯ್ಕರ್, ಸತ್ಯನಾರಾಯಣ ಹೇಮಾದ್ರಿ, ಲಕ್ಷ್ಮೀನಾರಾಯಣ ಕಾಸಟ್ ಇದ್ದರು.