ಭಟ್ಕಳ: ಯಾವುದೆ ಜಾತಿ, ಧರ್ಮ, ಸರ್ಕಾರ ಅಥವಾ ರಾಜಕೀಯ ಪಕ್ಷಗಳ ವಿರುದ್ಧ ನಾವು ಹೋರಾಟ ಮಾಡುತ್ತಿಲ್ಲ. ನಮ್ಮ ಜನಾಂಗದ ಹಕ್ಕನ್ನು ಉಳಿಸಿಕೊಳ್ಳಲು ರಸ್ತೆಗಿಳಿಯಬೇಕಾಗಿದೆ ಎಂದು ಹಿಂದುಳಿದ ವರ್ಗ 2ಎ ಹಿತರಕ್ಷಣಾ ವೇದಿಕೆ ಅಧ್ಯಕ್ಷ, ಮಾಜಿ ಶಾಸಕ ಜೆ.ಡಿ. ನಾಯ್ಕ ಹೇಳಿದರು.
ನಿಚ್ಛಲಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಶನಿವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪಂಚಮಸಾಲಿ ಸಮಾಜ 2ಎ ವರ್ಗದಲ್ಲಿ ಸೇರುವುದರಿಂದ ಸಣ್ಣ ಪುಟ್ಟ ಸಮಾಜಗಳು ಸಂವಿಧಾನಿಕ ಹಕ್ಕಿನಿಂದ ವಂಚನೆಗೊಳಗಾಗುತ್ತವೆ. ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಹಿಂದುಳಿದ ವರ್ಗ 2ಎ ಹಿತರಕ್ಷಣಾ ವೇದಿಕೆಯಡಿ ನಡೆಯುವ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಮಾವೇಶಕ್ಕೆ ಭಟ್ಕಳ ತಾಲೂಕಿನಾದ್ಯಂತ ವ್ಯಾಪಕ ಬೆಂಬಲ ದೊರೆಯುತ್ತಿದೆ ಎಂದರು.
ಹಿಂದುಳಿದ ವರ್ಗಗಳ 2ಎ ಮೀಸಲಾತಿ ಪಟ್ಟಿಯಲ್ಲಿ ಜಿಲ್ಲೆಯಲ್ಲಿ ವಾಸಿಸುವ ಅಂದಾಜು 20 ವಿವಿಧ ಸಣ್ಣಪುಟ್ಟ ಸಮಾಜಗಳು ಬೆಂಬಲ ವ್ಯಕ್ತಪಡಿಸಿವೆ. ಫೆ. 22ರಂದು ಮಧ್ಯಾಹ್ನ 2ಕ್ಕೆ ಪುರವರ್ಗ ಕಾಸ್ಮುಡಿ ಕಟ್ಟೆಯಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಪೊಲೀಸ್ ಮೈದಾನದಲ್ಲಿ ಸಮಾವೇಶವಾಗಲಿದೆ ಎಂದರು.
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಾರಥ್ಯದಲ್ಲಿ ಜೆ.ಡಿ. ನಾಯ್ಕ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ ನಾಯ್ಕ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಉದಯ ಕೋಟ್ಯಾನ, ಸುನೀಲಕುಮಾರ, ಕುಮಾರ ಬಂಗಾರಪ್ಪ, ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ, ಜೆ.ಪಿ. ಸುಧಾಕರ, ರಾಜಶೇಖರ ಕೋಟ್ಯಾನ, ಶ್ರೀನಿವಾಸ ಬಾಬು, ಡಾ. ಲಕ್ಷ್ಮೀನರಸಯ್ಯ, ಭೀಮಣ್ಣ ನಾಯ್ಕ, ಡಾ. ಶ್ರೀಪಾದ ಶೆಟ್ಟಿ ಪಾಲ್ಗೊಳ್ಳುವರು. ಸಮಾವೇಶದ ಪೂರ್ವಭಾವಿಯಾಗಿ ಮುರ್ಡೆಶ್ವರ ಮತ್ತು ಭಟ್ಕಳದಿಂದ ಫೆ. 21ರಂದು ಮಧ್ಯಾಹ್ನ 2.30ಕ್ಕೆ ನೂರಾರು ಯುವಕರು ಗ್ರಾಮಾಂತರ ಪ್ರದೇಶಗಳಲ್ಲಿ ಬೈಕ್ ರ‍್ಯಾಲಿ ನಡೆಸಿ ಜನಜಾಗೃತಿ ಮೂಡಿಸಲಿದ್ದಾರೆ ಎಂದರು. ಶಾಸಕ ಸುನೀಲ ನಾಯ್ಕ, ವಿಠ್ಠಲ ನಾಯ್ಕ, ಕೃಷ್ಣಾ ನಾಯ್ಕ, ಸತೀಶಕುಮಾರ ನಾಯ್ಕ, ಸುಭಾಸ ಶೆಟ್ಟಿ ಇದ್ದರು.