ಚಿಕ್ಕೋಡಿ ಗ್ರಾಮೀಣ, ಬೆಳಗಾವಿ: ಪ್ರಾದೇಶಿಕವಾಗಿ ಹಂಚಿ ಹೋದ ಕನ್ನಡದ ಎಲ್ಲ ಮನಸ್ಸುಗಳು ಒಗ್ಗೂಡಬೇಕು. ಕನ್ನಡ ಉಳಿಸಿ-ಬೆಳೆಸಿದ ಕೀರ್ತಿ ಗಡಿಕನ್ನಡಿಗರಿಗೆ ಸಲ್ಲುತ್ತದೆ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ತಾಲೂಕಿನ ಯಕ್ಸಂಬಾದ ಗೆಳೆಯರ ಬಳಗದಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ 35ನೇ ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಡಿಕನ್ನಡಿಗರ ಸಮಸ್ಯೆಗಳಿಗೆ ಸ್ಪಂದನೆ ಸಿಗಬೇಕಿದೆ ಎಂದರು.
ಚಿತ್ರನಟ ರಾಮಕೃಷ್ಣ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ದೀಪ ಬೆಳಗಿಸಿದ ಯಕ್ಸಂಬಾ ಗೆಳೆಯರ ಬಳಗದ ಅಧ್ಯಕ್ಷ ಗಡಿನಾಡಿನ ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಅನಿಲ ಕಮತಿ ಅವರ ಕನ್ನಡದ ಸೇವೆ ಹಾಗೂ ಗಡಿಜನರ ಕನ್ನಡದ ಪ್ರೀತಿ ಪ್ರಶಂಸನೀಯ ಎಂದರು. ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಬೆಂಗಳೂರಿನಿಂದ ದೂರವಿರುವ ಉತ್ತರ ಕರ್ನಾಟಕದ ಗಡಿಕನ್ನಡಿಗರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ, ಕನ್ನಡಿಗರ ಏಳಿಗೆಗೆ ಎಲ್ಲರೂ ಶ್ರಮಿಸಬೇಕಾಗಿದೆ ಎಂದರು.
ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು. ಡಾ. ಪ್ರಭಾಕರ ಕೋರೆ ಅವರ ಕನ್ನಡದ ಸೇವೆ ಪರಿಗಣಿಸಿ ಅವರನ್ನು ಸತ್ಕರಿಸಲಾಯಿತು. ಶೃತಿ ಹೆಗ್ಗೆಯವರ ಬಣ್ಣದ ಗರಿ ಎಂಬ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.
ಬಳಗದ ಸದಸ್ಯ ವಿಜಯ ದಾನವಾಡೆ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಸುಬ್ರಾವ ಎಂಟೆತ್ತಿನವರ, ಗೆಳೆಯರ ಬಳಗದ ಅಧ್ಯಕ್ಷ ನಿಖಿಲ ಕಮತಿ, ಗಣ್ಯರಾದ ಸದಾನಂದ ಹಿರೇಮಠ, ವಿಜಯ ಬಾಕಳೆ, ಮಲ್ಲಿಕಾರ್ಜುನ ದಡ್ಡಿಕರ, ಸಂತೋಷ ಪಾಟೀಲ, ಮಹಾದೇವ ರೇಂದಾಳೆ, ಬಿ.ಎನ್.ಬಾಕಳೆ, ಮಹೇಶ ಬಾಕಳೆ, ಮಾರುತಿ ಮಾನೆ ಇತರರಿದ್ದರು.