ಹಾಸನ: ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ, ಸಮಾಜದ ಉಳಿವಿಗಾಗಿ ಮಹಿಳೆಯರ ಪಾತ್ರ ಮುಖ್ಯವಾಗಿದ್ದು, ನಮ್ಮ ಮನೆಯಲ್ಲಿ ನನ್ನ ತಾಯಿ ನನ್ನನ್ನು ತಿದ್ದಿ ತೀಡಿ ಬುದ್ದಿ ಹೇಳಿ ಬೆಳೆಸಿದ್ದರಿಂದ ನಾನಿಂದು ಸಂಸದನಾಗಿ ನಿಮ್ಮ ಮುಂದಿದ್ದೇನೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
ನಗರದ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬುಧವಾರ ಮಾತೃಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಹೊಲಿಗೆ ತರಬೇತಿ ಪ್ರಮಾಣ ಪತ್ರ ಹಾಗೂ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವೆಲ್ಲರೂ ತಾಯಿಯ ಮಡಿಲಿನಿಂದಲೇ ಬಂದಿದ್ದು ಸ್ತ್ರೀಯರಿಗೆ ಮೊದಲು ಗೌರವ ಕೊಡುವುದನ್ನು ಕಲಿಯಬೇಕು ಎಂದರು.
ನಾನು ಮೊದಲು ನಿಮ್ಮ ಸಹೋದರ, ನಂತರ ಸಂಸದನಾಗಿ ನಿಮ್ಮ ಕಾರ್ಯಗಳಿಗೆ ಜೊತೆಯಾಗುತ್ತ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳು ಹಾಗೂ ಇತರ ಯೋಜನೆಗಳನ್ನು ಅವಶ್ಯಕತೆ ಇರುವ ಮಹಿಳೆಯರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಜಾತ್ಯಾತೀತವಾಗಿ ಮತ್ತು ಪಕ್ಷಾತೀತವಾಗಿ ಮಾಡುವುದಾಗಿ ಭರವಸೆ ನೀಡಿದರು.
ನಂತರ ಮಾತನಾಡಿದ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ತಾರಾ ವೆಂಕಟರಾಮ, ತಮ್ಮ ಸಂಸ್ಥೆಯಲ್ಲಿ 10ಸಾವಿರಕ್ಕೂ ಹೆಚ್ಚಿನ ಜನರಿಗೆ ಈಗಾಗಲೇ ಹೊಲಿಗೆ ತರಬೇತಿಯನ್ನು ನೀಡಿದ್ದೇವೆ ಎಂದು ಸಭೆಯ ಗಮನಕ್ಕೆ ತಂದರು.
ಇದೆ ವೇಳೆ ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕ ಸಿದ್ದರಾಜು, ಟ್ರಸ್ಟ್ ಅಧ್ಯಕ್ಷ ವೆಂಕಟರಾಮು ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.