ಜಿಲ್ಲೆ

ಸ್ವಾಸ್ಥ್ಯ ಜಿಲ್ಲೆಗೆ ಯೋಗ ಜೀವನಶೈಲಿಯಾಗಲಿ

ಕಲಬುರಗಿ: ಸ್ವಾಸ್ಥö್ಯ ಮತ್ತು ಆರೋಗ್ಯವಂತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಯೋಗಾಭ್ಯಾಸ ನಮ್ಮೆಲ್ಲರ ದೈನಂದಿನ ಜೀವನಶೈಲಿ ಆಗಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಸ್ವಂತ ಮತ್ತು ಸಮಾಜಕ್ಕಾಗಿ ಯೋಗ ಧ್ಯೇಯವಾಕ್ಯದೊಂದಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಸಹಯೋಗದಡಿ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ೧೦ನೇ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿದ ಅವರು, ಆಧುನಿಕ ಜೀವನಶೈಲಿಯಿಂದ ಹಲವು ರೋಗಕ್ಕೆ ತುತ್ತಾಗುತ್ತಿದ್ದು, ಇದರಿಂದ ಹೊರಬರಬೇಕಾದರೆ ಯೋಗವೊಂದೇ ಮಾರ್ಗ ಎಂದರು.
ಈ ತಿಂಗಳ ಅಂತ್ಯದವರೆಗೆ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಸಾಮೂಹಿಕ ಯೋಗಾಭ್ಯಾಸ ಮಾಡಿಸಲಾಗುತ್ತಿದ್ದು, ಮಕ್ಕಳು ಸಕ್ರಿಯರಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ನಗರ ಪೊಲೀಸ್ ಆಯುಕ್ತ ಆರ್.ಚೇತನ್ ಮಾತನಾಡಿ, ಭಾರತದ ಯೋಗ ಪದ್ಧತಿಗೆ ಇಡೀ ವಿಶ್ವ ಮೆಚ್ಚಿದೆ. ವಿವಿಧ ದೇಶಗಳಲ್ಲಿ ಇಂದು ಯೋಗ ದಿನ ಆಚರಿಸಲಾಗುತ್ತಿದೆ. ಉತ್ತರ ಗೋಳಾರ್ಧದಲ್ಲಿರುವ ವರ್ಷದ ಸುದೀರ್ಘ ದಿನವಾಗಿರುವ ಇಂದು ಬೆಳಕಿನ ಮಹತ್ವ ಸಾರುತ್ತಿದೆ. ಸೂರ್ಯನು ದಕ್ಷಿಣಾಯನಕ್ಕೆ ಪಯಣಿಸುವ ಪರಿವರ್ತನೆ ಸಂಕೇತ ದಿನವೇ ಅಂತಾರಾಷ್ಟಿçÃಯ ಯೋಗ ದಿನ ಆಚರಿಸಲಾಗುತ್ತದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಿರಿಜಾ ಎಸ್.ಯು. ಪ್ರಾಸ್ತಾವಿಕ ಮಾತನಾಡಿದರು. ಸರ್ಕಾರಿ ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲ ಶ್ರೀಕಾಂತ ಫುಲಾರಿ ನಿರೂಪಣೆ ಮಾಡಿದರು.
ಇದಕ್ಕೂ ಮುನ್ನ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಜಹರ್ ಆಲಂಖಾನ್, ಡಿಸಿ ಬಿ.ಫೌಜಿಯಾ ತರನ್ನುಮ್, ಎಸ್‌ಪಿ ಅಕ್ಷಯ್ ಹಾಕೈ, ಅಪರ ಡಿಸಿ ರಾಯಪ್ಪ ಹುಣಸಗಿ, ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ, ಇಇ ಶಿವನಗೌಡ ಪಾಟೀಲ್, ಡಿಎಚ್‌ಒ ಡಾ.ರತಿಕಾಂತ ಸ್ವಾಮಿ, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ, ಡಿಡಿಪಿಯು ಶಿವಶರಣಪ್ಪ ಮುಳೆಗಾಂವ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ ಅವರು ಮಕ್ಕಳು, ಸಾರ್ವಜನಿಕರೊಂದಿಗೆ ಯೋಗಾಭ್ಯಾಸ ಮಾಡಿದರು.
ಸುದೀರ್ಘ ೪೫ ನಿಮಿಷ ಯೋಗಾಭ್ಯಾಸ ಹೇಳಿಕೊಟ್ಟ ಆಯುಷ್ ಇಲಾಖೆ ಯೋಗ ತರಬೇತುದಾರರಾದ ಸುದೀಪ ಮಾಳಗಿ, ಶಶಿಕಲಾ ಗುತ್ತೇದಾರ್, ಭೂಮಿ ಯೋಗಾ ಫೌಂಡೇಷನ್ ಯೋಗ ಗುರು ನಾಗರಾಜ ಸಾಲೊಳ್ಳಿ, ಶಾಲೆಗಳಲ್ಲಿ ಯೋಗ ತರಬೇತಿ ನೀಡಿದ ಪತಂಜಲಿ ಯೋಗ ಸಮಿತಿಯ ಸುಮಂಗಲಾ ಚಕ್ರವರ್ತಿ ಹಾಗೂ ಬ್ರಹ್ಮಪುರ ಚವದಾಪುರಿ ಹಿರೇಮಠ ಪ್ರೌಢಶಾಲೆ ಯೋಗ ವಿದ್ಯಾರ್ಥಿ ಅನೀಲಕುಮಾರ ಅವರನ್ನು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಸತ್ಕರಿಸಿದರು.