ಚಿತ್ರದುರ್ಗ: ಮಾನಸಿಕ ಆರೋಗ್ಯದಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ, ಹಾಗೆಯೇ ಅಂಗವಿಕಲರಿಗೆ ಅವಕಾಶ ಕಲ್ಪಿಸಿಕೊಟ್ಟರೆ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ನೆರವಾಗಲಿದೆ ಎಂದು ತಾಪಂ ಇಒ ವೈ. ರವಿಕುಮಾರ್ ಹೇಳಿದರು.
ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಪಂ, ಸಮುದಾಯ ಆಧಾರಿತ ಸಮನ್ವಯ ಅಭಿವೃದ್ಧಿ, ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಭಾರತ್ ಸೇವಾದಳದ ಕಟ್ಟಡದಲ್ಲಿ ಗುರುವಾರ ಆಯೋಜಿಸಿದ್ದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಗವಿಕಲರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿದರೆ ಅವರು ಸಮಾಜದಲ್ಲಿ ಅತ್ಯುತ್ತಮ ಬದುಕು ಕಟ್ಟಿಕೊಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ನಾಗಭೂಷಣ್ ಮಾತನಾಡಿ, ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಚಿಕಿತ್ಸೆ ಕೊಡಿಸುವ ಕೆಲಸ ಆಗಬೇಕು. ಪ್ರಸ್ತುತ ಎಲ್ಲರೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಮಾನಸಿಕ ಆರೋಗ್ಯ ಸುಧಾರಣೆ, ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೈಶಾಲಿ, ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸಮೂರ್ತಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕ್ಲಿನಿಕಲ್ ಸೈಕಾಲಜಿಸ್ಟ್ ಟಿ. ಶ್ರೀಧರ್ ಮಾತನಾಡಿದರು.
ಭಾರತ ಸೇವಾದಳದ ಜಿಲ್ಲಾ ಸಂಘಟಕ ಅಣ್ಣಯ್ಯ, ನಾಗರಾಜ್, ಮೈಲಾರಪ್ಪ, ನರಸಿಂಹಮೂರ್ತಿ, ದಾದಾಪೀರ್, ಎನ್. ಅರುಣ್‌ಕುಮಾರ್, ರಮೇಶ್, ಉಮಾದೇವಿ, ಶೈಲಜಾ, ಕರಿಬಸಪ್ಪ, ನೀಲಾಂಬಿಕೆ ಇದ್ದರು.