ಬನ್ನೂರು: ಮಹಿಳೆಯರು ಸ್ವಾವಲಂಬಿಯಾಗಿ ಬದುಕು ನಡೆಸಲು ಸ್ವಉದ್ಯೋಗ ಸಹಕಾರಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಉಮಾವತಿ ತಿಳಿಸಿದರು.
ಪಟ್ಟಣದ ಸಮೀಪದ ಹನುಮನಾಳು ಗ್ರಾಮದ ಸಮೃದ್ಧಿ ಜ್ಞಾನವಿಕಾಸ ಕೇಂದ್ರದಲ್ಲಿ ಆಯೋಜಿಸಿದ ಸ್ವ ಉದ್ಯೋಗ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆನ್ನುವ ಹೇಮಾವತಿ ಹೆಗ್ಡೆ ಅವರ ಆಶಯದಂತೆ ಸ್ವಉದ್ಯೋಗ ತರಬೇತಿ ಹಮ್ಮಿಕೊಳ್ಳುತ್ತಿದ್ದು, ಇದರಿಂದ ಮಹಿಳೆಯರ ಜೀವನ ಹಸನಾಗುತ್ತದೆ ಎಂದರು.
ಮಾನವ ಸಂಪನ್ಮೂಲ ತರಬೇತಿ ಸಂಸ್ಥೆಯ ಉಪನ್ಯಾಸಕ ಹರೀಶ್ ಮಾತನಾಡಿ, ಚಾಲಕ ವೃತ್ತಿಯಿಂದ ಅಂತರಿಕ್ಷದವರೆಗೂ ಮಹಿಳೆಯರು ಅಭಿವೃದ್ಧಿ ಸಾಧಿಸುತ್ತಿದ್ದರೂ ಇಂದಿಗೂ ಗ್ರಾಮಾಂತರ ಪ್ರದೇಶದಲ್ಲಿ ಮಹಿಳೆಯರ ಬದುಕು ದುಸ್ತರ. ಅಂತಹವರನ್ನು ಮುಖ್ಯವಾಹಿನಿಗೆ ತರಬೇಕೆನ್ನುವ ನಿಟ್ಟಿನಲ್ಲಿ ಸ್ವಉದ್ಯೋಗ ತರಬೇತಿ ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸ್ವ ಉದ್ಯೋಗದ ಮಹತ್ವ ಹಾಗೂ ಸಂಸ್ಥೆಯಲ್ಲಿ ನಡೆಯುವ ತರಬೇತಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ವಲಯ ಮೇಲ್ವೀಚಾರಕಿ ಶಶಿಕಲಾ, ಜೆವಿಕೆ ಪ್ರಮೀಳಾ, ಕೇಂದ್ರದ ಅಧ್ಯಕ್ಷೆ ಶಿಲ್ಪಾ, ಎಸ್.ಪಿ.ಶೃತಿ ಇತರರಿದ್ದರು.