ಮಳವಳ್ಳಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಗಳವಾರ ಆಯೋಜಿಸಿದ್ದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಶಾಸಕ ಡಾ.ಕೆ.ಅನ್ನದಾನಿ ಉದ್ಘಾಟಿಸಿದರು. ರಾಧಾ ನಾಗರಾಜು , ಪಾಂಡಿಯನ್, ಡಾ.ಸ್ಮಿತಾ, ಕಾವೇರಿ, ದಿನೇಶ್ ಪೂಜಾರಿ ಇದ್ದರು. 
ಜಿಲ್ಲೆ

ಸ್ವಾವಲಂಬಿ ಬದುಕಿಗೆ ಸ್ತ್ರೀಶಕ್ತಿ ಸಂಘಗಳಿಂದ ಉತ್ತೇಜನ

Mandya

ಮಳವಳ್ಳಿ: ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಿದ್ದು, ಜತೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸಾಲಗಳನ್ನೂ ಮನ್ನಾ ಮಾಡಿಸಲು ಎಚ್.ಡಿ.ಕುಮಾರಸ್ವಾಮಿ ಅವರನ್ನು ಒಪ್ಪಿಸಲಾಗುವುದು ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿ, ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಮಹಿಳಾ ಸ್ವಸಹಾಯ ಸಂಘಗಳ ಚಾಲನೆಗೆ ತಂದಿತ್ತು. ನಂತರದ ದಿನಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಮಹಿಳಾ ಸಂಘಗಳನ್ನು ಕಟ್ಟಿ ಹೆಚ್ಚಿನ ಪ್ರಮಾಣದಲ್ಲಿ ಸಂಘಟಿಸಿ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಲು ಸಹಕಾರಿಯಾಗಿದೆ ಎಂದರು.
ಜತೆಗೆ ಕೆರೆ, ಕಟ್ಟೆಗಳ ಅಭಿವೃದ್ಧಿ, ಶೌಚಗೃಹಗಳ ನಿರ್ಮಾಣ ಸೇರಿದಂತೆ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ಕುಟುಂಬ ನಿರ್ವಹಣೆಯನ್ನು ಬೇರೊಬ್ಬರಿಗೆ ಆಸರೆಯಾಗದೆ ಸ್ವಾವಲಂಬಿಯಾಗಿ ಬದುಕಲು ಸ್ತ್ರೀಶಕ್ತಿ ಸಂಘಗಳು ಉತ್ತೇಜನ ನೀಡಿವೆ ಎಂದು ಅಭಿಪ್ರಾಯಪಟ್ಟರು.

ಯೋಜನೆಯ ಜಿಲ್ಲಾ ನಿರ್ದೇಶಕಿ ಚೇತನಾ ಮಾತನಾಡಿ, ಮಹಿಳೆಯೊಬ್ಬರೂ ಪ್ರಜ್ಞಾವಂತರಾದರೆ ಕುಟುಂಬಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲಿದ್ದಾರೆ. ಅಲ್ಲದೆ, ಸ್ವಚ್ಛತೆ ಸೇರಿದಂತೆ ಎಲ್ಲ ರೀತಿಯಲ್ಲೂ ಆರೋಗ್ಯವಂತ ಬದುಕು ಕಟ್ಟಿಕೊಡುವುದರ ಜತೆಗೆ ಸಂಬಂಧಗಳ ಮೌಲ್ಯಗಳನ್ನು ತಿಳಿಸಿಕೊಡುವಲ್ಲಿ ಸ್ತ್ರೀಯರ ಪಾತ್ರ ಅಪಾರವಾಗಿದೆ ಎಂದರು.

ಸಮಾಜ ಪರಿವರ್ತನೆಗೆ ತಂದೆ ತಾಯಿಯ ಜವಾಬ್ದಾರಿ ಹೆಚ್ಚಿನದ್ದಾಗಿದೆ. ಇಂಥ ಮಹಿಳೆಯರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಜ್ಞಾನ ವಿಕಾಸನ ಹೆಚ್ಚಿಸಲು ವಿಚಾರಗೋಷ್ಠಿ ನಡೆಸಲಾಗುತ್ತಿದ್ದು, ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.

ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಯೋಜನಾಧಿಕಾರಿ ಪಾಂಡಿಯನ್, ವೈದ್ಯೆ ಡಾ.ಸ್ಮಿತಾ, ಪಾಂಶುಪಾಲೆ ಕಾವೇರಿ, ದಿನೇಶ್ ಪೂಜಾರಿ ಇತರರು ಇದ್ದರು.