ಜಿಲ್ಲೆ

ಸ್ವಾವಲಂಬಿ ಬದುಕಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ

ಹನೂರು: ಪ್ರತಿಯೊಬ್ಬರೂ ಸ್ವಾವಲಂಬನೆಯ ಬದುಕನ್ನು ರೂಪಿಸಿಕೊಳ್ಳುವುದರ ಮೂಲಕ ಆರ್ಥಿಕವಾಗಿ ಸಬಲರಾಗಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಹಕಾರಿಯಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಆರ್.ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣ ಸಮೀಪದ ಆರ್.ಎಸ್.ದೊಡ್ಡಿಯ ಗೌರಿಶಂಕರ ಕಲ್ಯಾಣ ಮಂಟಪದ ಬಳಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ್ದ ಹನೂರು ಬಿ ವಲಯ ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧನಾ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಹಳ್ಳಿಯಿಂದ ಪ್ರಾರಂಭವಾದ ಸಂಸ್ಥೆಯು ಇಂದು ರಾಜ್ಯ ವ್ಯಾಪಿ ಪಸರಿಸಿದ್ದು, 6 ಲಕ್ಷ ಸದಸ್ಯರನ್ನು ಒಳಗೊಂಡಿರುವುದರ ಮೂಲಕ ಪ್ರಸಿದ್ಧಿ ಪಡೆದಿದೆ. ಈ ಸಂಸ್ಥೆಯು ಕೃಷಿಕರಿಗೆ, ಮಹಿಳೆಯರಿಗೆ ಹಿಂದುಳಿದ ವರ್ಗಕ್ಕೆ ಆರ್ಥಿಕ ಸಹಾಯವನ್ನು ನೀಡುವುದರ ಜತೆಗೆ ಗ್ರಾಮೀಣಾಭಿವೃದ್ಧಿಯ ಸಂಕಲ್ಪವನ್ನು ತೊಟ್ಟಿದೆ. ಈ ದಿಸೆಯಲ್ಲಿ ಕೃಷಿ, ಶಿಕ್ಷಣ, ಸ್ವ ಉದ್ಯೋಗ, ಆರೋಗ್ಯ ಸೇರಿದಂತೆ ಇನ್ನಿತರೆ ಕ್ಷೇತ್ರಗಳಲ್ಲಿ ಉತ್ತೇಜನ ನೀಡುತ್ತಿದೆ. ಅಲ್ಲದೇ ಸದಸ್ಯರಲ್ಲಿ ಶಿಸ್ತುಬದ್ದತೆಯನ್ನು ರೂಢಿಸಿಕೊಂಡಿದೆ. ಸ್ವಸಹಾಯ ಸಂಘಗಳು ಅದರಲ್ಲೂ ಮಹಿಳೆಯರು ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು ಈ ಯೋಜನೆ ನೆರವಾಗಿದೆ ಎಂದು ತಿಳಿಸಿದರು.

ಮಾಜಿ ಶಾಸಕಿ ಪರಿಮಳಾ ನಾಗಪ್ಪ ಮಾತನಾಡಿ, ಶ್ರೀ ಧರ್ಮಸ್ಥಳ ಸಂಸ್ಥೆಯು ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ರಾಜ್ಯದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದೆ. ರಾಜ್ಯದಲ್ಲಿ 6 ಲಕ್ಷ ಸಂಘಗಳಿದ್ದು, 52 ಲಕ್ಷ ಸದಸ್ಯರನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ 16 ಸಾವಿರ ಸಂಘದಲ್ಲಿ 1.26 ಲಕ್ಷ ಸದಸ್ಯರಿದ್ದಾರೆ. ಹನೂರು ತಾಲೂಕಿನಲ್ಲಿ 376 ಸಂಘಗಳಿದ್ದು, 3,170 ಸದಸ್ಯರನ್ನು ಹೊಂದಿದೆ. ಪ್ರಸ್ತುತ ಸ್ತ್ರೀ ಶಕ್ತಿ ಸ್ವಸಹಾಯ ಸಂಘ, ಒಡಿಪಿ ಹಾಗೂ ಮೈರಾಡ ಸಂಸ್ಥೆಯ ಸಂಘಗಳಿವೆ. ಆದರೆ ಶ್ರೀ ಧರ್ಮಸ್ಥಳ ಸಂಸ್ಥೆಯು ಎಲ್ಲ ವರ್ಗದ ಜನರಿಗೂ ಸಮಾನತೆಯನ್ನು ಕಲ್ಪಿಸಿಕೊಡುವುದರ ಮೂಲಕ ಮಾದರಿಯಾಗಿದೆ ಎಂದರು.

200 ಕೋಟಿ ರೂ.ನ ವಾರಸುದಾರರು: ಜಿಲ್ಲಾ ಯೋಜನಾ ನಿರ್ದೇಶಕಿ ಲತಾ ಬಂಗೇರಾ ಮಾತನಾಡಿ, ಜಿಲ್ಲೆಯಲ್ಲಿ 1.26 ಲಕ್ಷ ಸದಸ್ಯರಿದ್ದು, ಈ ಹಿಂದೆ ಸದಸತ್ವ ಪಡೆಯಲು ನೀವು ಪಾವತಿಸಿದ 10 ರೂ. ಈಗ 200 ಕೋಟಿ ರೂ. ಆಗಿದೆ. ಹಾಗಾಗಿ ತಾವೆಲ್ಲರೂ 200 ಕೋಟಿ ರೂ. ನ ವಾರಸುದಾರರು. ಶೌಚಗೃಹ ನಿರ್ಮಾಣ, ಕುರಿ ಸಾಕಣೆ, ಶಿಕ್ಷಣ, ಕೃಷಿ ಹಾಗೂ ಇನ್ನಿತರೆ ಕ್ಷೇತ್ರಗಳಿಗೆ ಉತ್ತೇಜನ ನೀಡಲು ಆರ್ಥಿಕ ಸಹಾಯ ಧನವನ್ನು ನೀಡಲಾಗುತ್ತದೆ. ದೇಗುಲಗಳ ಪುನಶ್ಚೇತನ, ಹಾಲಿನ ಡೇರಿ ಕಟ್ಟಡ ನಿರ್ಮಾಣ, ಸ್ಮಶಾನಗಳ ಅಭಿವೃದ್ಧಿಗೂ ಒತ್ತನ್ನು ನೀಡಿದೆ. ಅಸಹಾಯಕರಿಗೆ ಅಗತ್ಯ ಸವಲತ್ತುಗಳನ್ನು ನೀಡುತ್ತಿದೆ ಎಂದರು.

ಇದೇ ವೇಳೆ ಶ್ರೀ ಬೆಟ್ಟಳ್ಳಿ ಮಾರಮ್ಮ, ಸ್ಫೂರ್ತಿ, ಕಾಮಧೇನು, ಮಹದೇಶ್ವರ, ಸಿದ್ದಪ್ಪಾಜಿ, ಮಲೆಮಹದೇಶ್ವರ, ನೇತ್ರಾವತಿ, ಗಜಾನನ ಹಾಗೂ ಮದೀನ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಲಾಯಿತು. ಜನಮಂಗಳ ಕಾರ್ಯಕ್ರಮದಡಿ ಅಸಹಾಯಕರಿಗೆ ಸಲಕರಣೆಗಳನ್ನು ವಿತರಿಸಲಾಯಿತು.

ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಪ್ರಕಾಶ್‌ನಾಯ್ಡು, ತಾಲೂಕು ಯೋಜನಾಧಿಕಾರಿ ಪ್ರವೀಣ್‌ಕುಮಾರ್, ಮೇಲ್ವಿಚಾರಕ ಕೃಷ್ಣ, ಮುಖಂಡರಾದ ಲೋಕೇಶ್‌ಜತ್ತಿ, ಅರವಿಂದ್, ಅಪ್ಪು ಹಾಗೂ ಒಕ್ಕೂಟದ ಪ್ರತಿನಿಧಿಗಳು, ಸದಸ್ಯರು ಇದ್ದರು.