ಜಿಲ್ಲೆ

ಸ್ವಾವಲಂಬಿ ಬದುಕಿಗೆ ಯೋಜನೆ ಸಹಕಾರಿ

ಪ್ರಶಾಂತ ಹೂಗಾರ

ಅಥಣಿ: ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರಿಗಾಗಿ ಬಿಮಾ ಸಖಿ ವಿಮಾ ಯೋಜನೆ ರೂಪಿಸಿದ್ದಾರೆ. ಹೀಗಾಗಿ, ಮಹಿಳೆಯರು ಸ್ವಾವಲಂಬಿಗಳಾಗಿ ಸಮೃದ್ಧ ಬದುಕು ಕಟ್ಟಿಕೊಳ್ಳಬೇಕೆಂಬುದು ಯೋಜನೆಯ ಸದುದ್ದೇಶವಾಗಿದೆ ಎಂದು ಎಲ್‌ಐಸಿ ಜಿಲ್ಲಾ ವಿಭಾಗಾಧಿಕಾರಿ ಬಿ.ಪಿ.ರವಿ ತಿಳಿಸಿದರು.

ಪಟ್ಟಣದ ಶಿವಣಗಿ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಥಣಿ-ರಾಯಭಾಗ ಶಾಖೆ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಿಮಾಕ್ಷೇತ್ರ ಬೃಹತ್‌ ಮಟ್ಟದಲ್ಲಿ ಬೆಳೆಯುತ್ತಿದೆ. ಹೀಗಾಗಿ, ಬಿಮಾ ಸಖಿ ಯೋಜನೆಯಲ್ಲಿ 2 ಲಕ್ಷ ಮಹಿಳಾ ಪ್ರತಿನಿಧಿಗಳನ್ನು ನಿಯೋಜಿಸುವ ಗುರಿ ಹೊಂದಿದ್ದು, ಒಂದೇ ದಿನದಲ್ಲಿ 25 ಸಾವಿರ ಮಹಿಳೆಯರು ಆಯ್ಕೆಯಾಗಿದ್ದಾರೆ. ಕಳೆದ ವರ್ಷ ದೇಶದಲ್ಲಿ 2 ಕೋಟಿ ಪಾಲಿಸಿಗಳು ಮಾರಾಟವಾಗಿವೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಮಾರ್ಕೇಂಟಿಗ್ ವ್ಯವಸ್ಥಾಪಕ ಗುರುರಾಜ ರಾವ್ ಹಾಗೂ ಪ್ರೊಡಕ್ಟ್ ವ್ಯವಸ್ಥಾಪಕ ವಿರೂಪಾಕ್ಷಿ , ಶಾಖಾ ವ್ಯವಸ್ಥಾಪಕ ವಾದಿರಾಜ ಕುಲಕರ್ಣಿ ಮಾತನಾಡಿದರು. ಅಭಿವೃದ್ಧಿ ಅಧಿಕಾರಿಗಳಾದ ಎ.ಜಿ.ಹೂಗಾರ, ನಾಗರಾಜ ದಾಸರ, ಪ್ರಶಾಂತ ಪಟ್ಟಣಶೆಟ್ಟಿ, ಏಜೆಂಟ್‌ರಾದ ಪ್ರಭಾಕರ ಚವ್ಹಾಣ, ಚಂದ್ರು ಪಾಟೀಲ, ಚಿದಾನಂದ ಮಾಳಿ ಇತರರಿದ್ದರು. ಜ್ಯೋತಿ ಪಾಟೀಲ ನಿರೂಪಿಸಿದರು. ಸಾಗರ ಗುಜ್ಜರ ವಂದಿಸಿದರು.