ಕಮಲನಗರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅನೇಕ ಜನೋಪಕಾರಿ ಕಾರ್ಯಗಳು ನಡೆಯುತ್ತಿದ್ದು, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಹಿಳೆಯರ ಸ್ವಾವಲಂಬಿ ಬದುಕು ಸೇರಿ ಇನ್ನಿತರ ಹಲವಾರು ಜನಪರ ಯೋಜನೆಗಳನ್ನು ಹಮ್ಮಿಕೊಂಡು ಜನರ ಮನೆ ಬಾಗಿಲಿಗೆ ಮುಟ್ಟಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಠಾಣಾಕುಶನೂರಿನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಔರಾದ್ ತಾಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿ ಹಾಗೂ ಪೂಜಾ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ, ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಪರಿವರ್ತನೆಗೆ ಕಾರಣರಾದ ಹೆಗ್ಗಡೆಯವರ ಸಮಾಜಮುಖಿ ಬದುಕು ಅತ್ಯಂತ ಶ್ರೇಷ್ಠವಾದದ್ದು ಎಂದು ಬಣ್ಣಿಸಿದರು.
ಸ್ಥಳೀಯ ವೀರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬೀದರ್‌ನ ಕರ್ನಾಟಕ ಬಿಇಡಿ ಕಾಲೇಜು ಉಪನ್ಯಾಸಕಿ ವಿದ್ಯಾವತಿ ಬಸವರಾಜ ಬಲ್ಲೂರ್ ವಿಶೇಷ ಉಪನ್ಯಾಸ ನೀಡಿದರು. ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಪ್ರಾಸ್ತಾವಿಕ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಕಾಶಿನಾಥ ಜೀರ್ಗೆ, ಜಿಲ್ಲಾ ಜನ ಜಾಗೃತಿ ಉಪಾಧ್ಯಕ್ಷ ಡಾ. ಶಾಲಿವಾನ ಉದಗಿರೆ, ಜಿಲ್ಲಾ ಜನ ಜಾಗೃತಿ ಸದಸ್ಯ ಮಲ್ಲಪ್ಪ ಗೌಡ, ಶಿವರಾಜ ಅಲಮಾಜೆ, ರಾಮಶೆಟ್ಟಿ ಪನ್ನಾಳೆ, ಕೇರಬಾ ಪವಾರ್, ಉಮಾಕಾಂತ ಪಾಟೀಲ, ಮಲ್ಲಿಕಾರ್ಜುನ, ಅನೀಲ್ ದಾವಣಿ, ಲೋಕೇಶ ಭಾಲ್ಕೆ, ಬಸವರಾಜ್, ಲಕ್ಷ್ಮೀಕಾಂತ, ಸಂಗೀತಾ, ಉಮೇಶ ಗೌಡ ಇತರರಿದ್ದರು. ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಗೌಡ ಸ್ವಾಗತಿಸಿ ವಂದಿಸಿದರು. ವಿಲಾಸ ಪೂಜಾರಿ ನಿರೂಪಣೆ ಮಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಾಯ ಪಡೆದು ಸ್ವಾವಲಂಬಿ ಬದುಕು ಸಾಗಿಸುತ್ತಿರುವ ೧೫ ಮಹಿಳಾ ಸಾಧಕಿಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ಔರಾದ್ ತಾಲೂಕಿನಲ್ಲಿ ೨೦೨೬-೨೭ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಕರೆಸಿ ಬೃಹತ್ ಮಹಿಳಾ ಕಾರ್ಯಕ್ರಮ ಮಾಡುವ ಯೋಜನೆ ರೂಪಿಸಿಲಾಗುವುದು. ಯೋಜನೆಯ ಅಧಿಕಾರಿಗಳು ಇದಕ್ಕೆ ಕೈಜೋಡಿಸಿ ಕಾರ್ಯಕ್ರಮದ ರೂಪುರೇಷ ತಯಾರಿಸಿ ನನಗೆ ನೀಡಬೇಕು. ಇದಕ್ಕೆ ಎಷ್ಟೇ ಹಣ ಖರ್ಚಾದರೂ ಸಹ ನಾನು ಸಹಕಾರ ನೀಡುವೆ.
| ಪ್ರಭು ಚವ್ಹಾಣ್ ಶಾಸಕ ಔರಾದ್