ಕಲಬುರಗಿ: ಶರಣ ಸಾಹಿತ್ಯ, ದಾಸೋಹ ಪರಿಕಲ್ಪನೆಯೊಂದಿಗೆ ಸ್ವಾವಲಂಬಿ, ಆತ್ಮವಿಶ್ವಾಸ ಮತ್ತು ಘನತೆಯ ದೇಶ ನಿರ್ಮಾಣದ ಕನಸು ಹೊತ್ತಿ ಇಡೀ ಜೀವನ ಸವೆಸಿದವರು ನಾಡೋಜ ಕೋ.ಚನ್ನಬಸಪ್ಪ (ಕೋ.ಚೆ) ಎಂದು ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಬಣ್ಣಿಸಿದರು.
ನಗರದ ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕೋ.ಚನ್ನಬಸಪ್ಪ ಜನ್ಮಶತಮಾನೋತ್ಸವ ಸಮಿತಿ ಸಹಯೋಗದಡಿ ಶನಿವಾರ ಏರ್ಪಡಿಸಿದ್ದ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರಳ, ಸಾಮಾಜಿಕ ಕಳಕಳಿ, ರಾಷ್ಟçಭಕ್ತಿ, ಶರಣರ ಕಾಯಕ-ದಾಸೋಹ ತತ್ವ ಅಳವಡಿಸಿಕೊಂಡು ಅರಿವು ಮೂಡಿಸಿದ್ದರು. ಸ್ವಾತಂತ್ರÈ ಹೋರಾಟಗಾರ, ನ್ಯಾಯಾಧೀಶ ಹಾಗೂ ಸಾಹಿತಿಯಾಗಿ ಅಮೋಘ ಸೇವೆ ಸಲ್ಲಿಸಿದ್ದರು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಜಟ್ಲಾ ಮಾತನಾಡಿ, ಶರಣರ ತತ್ವಗಳನ್ನು ಪುನರುಜ್ಜೀವನಗೊಳಿಸಲು ಶ್ರಮಿಸುತ್ತಿರುವ ಕೋ.ಚನ್ನಬಸಪ್ಪ ಮತ್ತು ಗೋರುಚ ವಿಚಾರ, ಬಸವತತ್ವಗಳ ಸಾರ ಮುಂದಿನ ಪೀಳಿಗೆಗೆ ತಲುಪಬೇಕು. ಶರಣರ ವಚನಗಳ ಶ್ರದ್ಧೆ, ಭಕ್ತಿ, ನಿಷ್ಠೆಯೊಂದಿಗೆ ಸಾಧನೆಯ ಶಿಖರ ಏರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಅಪ್ಪಾರಾವ ಅಕ್ಕೋಣಿ ಮಾತನಾಡಿ, ಸ್ವಾತಂತ್ರÈದ ಅಮೃತ ಮಹೋತ್ಸವ ಸಂದರ್ಭದಲ್ಲಿ ಎಲ್ಲ ಸ್ವಾತಂತ್ರÈ ಹೋರಾಟಗಾರರನ್ನು ಸ್ಮರಿಸಬೇಕು. ಗಾಂಧೀಜಿಯ ಬಡಕಲು ದೇಹ ನೋಡಿ ಬ್ರಿಟಿಷರು ದೇಶಬಿಟ್ಟು ಹೋಗಿಲ್ಲ. ಅವರ ಬೆನ್ನಿಗೆ ನಿಂತ ಲಕ್ಷಾಂತರ ಜನರು ಇದಕ್ಕೆ ಕಾರಣ. ಹಲವು ಯುವಕರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದರು ಎಂದರು.
ಹಿರಿಯ ಸಾಹಿತಿ ಆರ್.ಕೆ.ಹುಡಗಿ ಮಾತನಾಡಿ, ಕೋಚೆ ನಿಲುವುಗಳು ಸ್ಪಷ್ಟವಾಗಿದ್ದವು. ೮೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ೫ ಕವನ ಸಂಕಲನ, ೬ ಕಥಾ ಸಂಕಲನ, ೯ ಕಾದಂಬರಿ, ೮ ಜೀವನ ಚರಿತ್ರೆ, ವಿಮರ್ಶಾ ಗ್ರಂಥಗಳನ್ನು ನಾಡಿನ ಸಾಹಿತ್ಯ ಲೋಕಕ್ಕಾಗಿ ರೂಪಿಸಿದ್ದಾರೆ. ಅಂತಾರಾಷ್ಟಿçÃಯ ಸಾಹಿತಿಗಳ ಸಾಲಿನಲ್ಲಿ ನಿಲ್ಲುವ ವ್ಯಕ್ತಿತ್ವ ಕೋಚೆ ಅವರದ್ದು. ಅವರಿಗೆ ಜ್ಞಾನಪೀಠ, ಸರಸ್ವತಿ ಸಮ್ಮಾನ್ ಸಿಗಬೇಕಿತ್ತು ಎಂದು ಆಶಯ ವ್ಯಕ್ತಪಡಿಸಿದರು.
ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡಾ ಮಾತನಾಡಿದರು. ಕೋ.ಚೆ.ಸಾಹಿತ್ಯ ಮತ್ತು ಶಿಕ್ಷಣ ಟ್ರಸ್ಟ್ ಅಧ್ಯಕ್ಷೆ ಶಾಂತಾ ಜಯಪ್ರಸಾದ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಕೆ.ಐ.ಗುದಗಿ, ಶಾಂತಾ ಮಠ, ಡಾ.ವೀರಶೆಟ್ಟಿ ಗಾರಂಪಳ್ಳಿ, ಡಾ.ಶಾಂತಾ ಅಷ್ಟಗಿ ಇತರರಿದ್ದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ವಡ್ಡನಕೇರಿ ಪ್ರಾಸ್ತಾವಿಕ ಮಾತನಾಡಿದರು. ಡಾ.ವಿಜಯಕುಮಾರ ಪರೂತೆ ಸ್ವಾಗತಿಸಿದರು.