Oplus_0 
ಜಿಲ್ಲೆ

ಸ್ವಾವಲಂಬಿ ಜೀವನಕ್ಕೆ ಮಾರುಕಟ್ಟೆಯ ಕೌಶಲ ಮುಖ್ಯ

ಯಳಂದೂರು: ಮಹಿಳೆಯರು ಸ್ವಾವಲಂಬಿ ಜೀವನಕ್ಕೆ ತಾವೇ ತಯಾರಿಸಿದ ಉತ್ಪನ್ನವನ್ನು ಮಾರುಕಟ್ಟೆ ಮಾಡಿ ಹೆಚ್ಚು ಲಾಭಗಳಿಸುವ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ರಾಷ್ಟ್ರೀಯ ಗ್ರಾಮೀಣ ಜೀವನ ಉಪಾಯ್ ಮಿಷನ್‌ನ ತಾಲೂಕು ಯೋಜನಾ ವ್ಯವಸ್ಥಾಪಕ ಶ್ರೀಕಾಂತ್ ಸಲಹೆ ನೀಡಿದರು.

ಪಟ್ಟಣ ಸುವರ್ಣ ತಿರುಪತಿ ದೇಗುಲ ಸಮೀಪ ಶನಿವಾರ ರಾಷ್ಟ್ರೀಯ ಜೀವನ್ ಮಿಷನ್ ವತಿಯಿಂದ ನಡೆದ ಮಾಸಿಕ ಸಂತೆಯಲ್ಲಿ ಅವರು ಮಾತನಾಡಿದರು.

ತಾಲೂಕಿನ ಸಂಜೀವಿನಿ ಒಕ್ಕೂಟಗಳನ್ನು ಸ್ಥಾಪಿಸಲಾಗಿದೆ. ಎನ್‌ಆರ್‌ಎಲ್‌ಎಂ ಯೋಜನೆ ಮೂಲಕ 12 ಒಕ್ಕೂಟಗಳು ತಾಲೂಕಿನಲ್ಲಿ ಕೆಲಸವನ್ನು ನಿರ್ವಹಿಸುತ್ತಿವೆ. ಇವರು ತಯಾರಿಸುವ ಸ್ವದೇಶಿ ಉತ್ಪನ್ನಗಳನ್ನು ತಯಾರಿಸುವುಕ್ಕೆ ಸಹಾಯಧನ ನೀಡಲಾಗುತ್ತದೆ. ಇದರಲ್ಲಿ ಬಿದಿರಿನಿಂದ ತಯಾರಾಗುವ ವಸ್ತುಗಳು, ತೋರಣ, ಹಾರಗಳ ತಯಾರಿಕೆ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಸಿಹಿ ತಿನಿಸು, ಗಾಣದಿಂದ ತಯಾರಾಗುವ ಅಡುಗೆ ಎಣ್ಣೆ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳು, ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿರುವ ಉತ್ಪನ್ನಗಳು ಹಾಗೂ ಜನರ ಸದಭಿರುಚಿಗೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಉತ್ಪನ್ನಗಳ ತಯಾರಿಕೆಗೆ ತರಬೇತಿ ನೀಡಲಾಗುತ್ತದೆ. ಅಲ್ಲದೆ ಇವರ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರತಿ ತಿಂಗಳು ಜನನಿಬಿಡ ಪ್ರದೇಶಗಳಲ್ಲಿ ಸಂತೆಯನ್ನು ಮಾಡಿ ಈ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಎಲ್ಲ ರೀತಿಯ ಸೌಕರ್ಯಗಳನ್ನು ನೀಡಿ ಇವರಿಗೆ ಉತ್ತೇಜನ ನೀಡಲಾಗುತ್ತದೆ. ಇದರಿಂದ ಮಹಿಳೆಯರು ಸ್ವಾವಲಂಬಿಯಾಗಿ ಬದುಕು ನಡೆಸಲು ಸಾಧ್ಯವಾಗುವ ಜತೆಗೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಲಿದೆ.

ಈ ನಿಟ್ಟಿನಲ್ಲಿ ಗ್ರಾಹಕರು ಸಹ ಇಂತಹ ಉತ್ಪನ್ನಗಳನ್ನು ಖರೀದಿಸಿ ದೇಸಿಯ ವಸ್ತುಗಳ ಖರೀದಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ತಾಪಂನ ಸಹಾಯಕ ನಿರ್ದೆಶಕ ರವೀಂದ್ರನಾಥ್ ಸಂತೆಯನ್ನು ಉದ್ಘಾಟಿಸಿದರು. ಮಹಿಳಾ ಒಕ್ಕೂಟದ ಪ್ರೇಮಾ, ರಾಜಮ್ಮ, ರವಿ, ಮಧುಸೂದನ್ ಸೇರಿದಂತೆ ವಿವಿಧ ಮಹಿಳಾ ಒಕ್ಕೂಟಗಳ ಸದಸ್ಯರು ಹಾಜರಿದ್ದರು.