ವಿಜಯವಾಣಿ ಸುದ್ದಿಜಾಲ ಕಾರವಾರ
ಸ್ವಾವಲಂಬಿ, ಸ್ವಾಭಿಮಾನಿ ಮಾನಸಿಕತೆಯನ್ನು ನೀಡಬಲ್ಲ ಶಿಕ್ಷಣವನ್ನು ನೀಡಲು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದು, ಅದನ್ನು ಪೂರ್ಣ ಅರ್ಥ ಮಾಡಿಕೊಂಡು ಜಾರಿ ಮಾಡಲು ಶ್ರಮಿಸಿ, ಸಮಾಜದಲ್ಲಿ ಶಿಕ್ಷಕರ ಮೇಲಿರುವ ಗೌರವವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಕರೆ ನೀಡಿದರು.
ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಗುರುಭವನ, ಸರ್ಕಾರಿ ಮಹಿಳಾ ಕಾಲೇಜ್, ಸರ್ಕಾರಿ ಪದವಿ ಕಾಲೇಜ್ 11 ಶಾಲಾ ಕಟ್ಟಡ ಹಾಗೂ 14 ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರೀ ಶಿಕ್ಷಣ ನೀತಿಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮೆಕಾಲೆ ಶಿಕ್ಷಣ ನೀತಿ ನಮ್ಮಲ್ಲಿ ಪರಾವಲಂಬಿ, ವಸಾಹತುಶಾಹಿ ಮಾನಸಿಕತೆಯನ್ನು ಸೃಷ್ಟಿಸುತ್ತಿದೆ. ವ್ಯಕ್ತಿಯಲ್ಲಿರುವ ಶಕ್ತಿಯನ್ನು ಹೊರಗೆ ತರುವುದೇ ಶಿಕ್ಷಣ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಆದರೆ, ನಾವೂ ಮಕ್ಕಳ ತಲೆಗೆ ಬೇರೆಯದೇ ವಿಷಯ ತುಂಬುತ್ತಿದ್ದೇವೆ. ಎಕ್ಸ್ಪರ್ಟ್, ಎಕ್ಸ್ ಲೆಂಟ್ ಕಾಲೇಜ್‌ಗೆ ಹೋದರೆ ನೀಟ್ ಪಾಸಾಗುತ್ತಾರೆ ಎಂಬ ನಂಬಿಕೆ ಪಾಲಕರಲ್ಲಿ ಬೆಳೆದಿದೆ. ಅಮೇರಿಕ, ಜರ್ಮನಿಗೆ ಹೋದರೆ ಮಾತ್ರ ದೊಡ್ಡ ವ್ಯಕ್ತಿ ಎಂಬ ಮನೋಭಾವ ನಮ್ಮಲ್ಲಿದೆ. ಮಕ್ಕಳಿಗೆ ಭಗವಂತ ಕೊಟ್ಟ ಶಕ್ತಿ ಬಳಸಲು ನಾವು ಅವಕಾಶ ಕೊಡುತ್ತಿಲ್ಲ. ಮುಂದೆ ವ್ಯಕ್ತಿ ಸಂತೋಷ, ನೆಮ್ಮದಿಯಿಂದ ಬದುಕಬೇಕು ಎಂದರೆ ಹಣ ಮಾಡಬೇಕು ಎಂಬ ಒತ್ತಡವನ್ನು ನಾವು ಹಾಕುತ್ತಲೇ ಇದ್ದೇವೆ. ಆದರೆ, ಎಷ್ಟೇ ಹಣ ಗಳಿಸಿದರೂ ಇಂದು ವ್ಯಕ್ತಿಗಳ ಮನಸ್ಸಿಗೆ ಸಮಾಧಾನವಿಲ್ಲ. ಅಸಮಾಧಾನದ ಗೂಡಾಗಿ ಸಮಾಜ ನಿರ್ಮಾಣವಾಗುತ್ತಿದೆ. ಸಮಾಜದಲ್ಲಿ ಮನುಷ್ಯರ ನಡುವೆ ಅಪನಂಬಿಕೆ ಹೆಚ್ಚುತ್ತಿದೆ. ಇದು ಬದಲಾಗಬೇಕು ಎಂದರು ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ವ್ಯಕ್ತಿಯನ್ನು ಸ್ವಾವಲಂಬಿಯಾಗಿ ಬೆಳೆಸುವ, ಸಮಾಜವನ್ನು ಬದಲಾಯಿಸುವ ಶಕ್ತಿ ಇರುವುದು ಶಿಕ್ಷಣಕ್ಕೆ ಮಾತ್ರ. ಈ ಕಾರ್ಯ ದಾಽಸುವಲ್ಲಿ ಶಿಕ್ಷಕರ ಜವಾಬ್ದಾರಿ ದೊಡ್ಡದಿದೆ ಎಂದು ಕಿವಿಮಾತು ಹೇಳಿದರು.
ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಶಿಕ್ಷಕರು ಎಂದರೆ ದೇವರ ಸ್ವರೂಪ. ಸರಸ್ವತಿ ಅವರಲ್ಲಿ ನೆಲೆಸಿದ್ದಾಳೆ. ಕಾರವಾರ ಗುರುಭವನ ಸಂಪೂರ್ಣ ಹಾಳಾಗಿದ್ದು, ಸುವ್ಯವಸ್ಥಿತ ಕಟ್ಟಡ ನಿರ್ಮಾಣಕ್ಕೆ ನಾನು ಹಣ ತಂದಿದ್ದೇನೆ ಎಂದು ವಿವರಿಸಿದರು.
ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪಿ.ಪಿ.ನಾಯ್ಕ, ಎಸಿ ಜಯಲಕ್ಷ್ಮೀ ರಾಯಕೋಡ, ಡಯಟ್ ಪ್ರಾಂಶುಪಾಲ ಎನ್.ಜಿ.ನಾಯಕ, ಡಿಡಿಪಿಯು ಹನುಮಂತಪ್ಪ ನಿಟ್ಟೂರು. ಪಿಡಬ್ಲ್ಯುಡಿ ಎಇ ರಾಮಚಂದ್ರ ಗಾಂವಕರ್ ವೇದಿಕೆಯ ಮೇಲಿದ್ದರು. ಡಿಡಿಪಿಐ ಈಶ್ವರ ನಾಯ್ಕ ಸ್ವಾಗತಿಸಿದರು.
………..