ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾಗಿದ್ದ ಜಿಲ್ಲೆಯ ವಿವಿಧ ಮಠಗಳ ಸ್ವಾಮೀಜಿಗಳ ಮೇಲೆ ಪ್ರಕರಣ ದಾಖಲಿಸಿದ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ ಸ್ವಾಮೀಜಿಗಳ ಹೆಸರನ್ನು ಪ್ರಕರಣದಿಂದ ಕೈಬಿಡುವ ಮನಸ್ಸು ಮಾಡಿದೆ.
ತುಮಕೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, ಸ್ವಾಮೀಜಿಗಳ ವಿರುದ್ಧ ಗುಬ್ಬಿ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆ ಬಗ್ಗೆ ಪರಿಶೀಲಿಸಿ ವಾಪಸ್ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಹೋರಾಟದ ಸಂದರ್ಭದಲ್ಲಿ ಬಸ್ಗೆ ಯಾರು ಕಲ್ಲು ಹೊಡೆದು, ಟಯರ್ಗಳಿಂದ ಯಾರು ಗಾಳಿ ಬಿಟ್ಟರು ಎಂಬುದನ್ನು ಪರಿಶೀಲಿಸಲು ಪೊಲೀಸರ ಬಳಿಯಿರುವ ಕ್ಯಾಮರಾ ದೃಶ್ಯ ಪರಿಶೀಲಿಸಲು ತಿಳಿಸಿದ್ದೇನೆ. ಸ್ವಾಮೀಜಿ ಹೆಸರನ್ನು ಎ್ಐಆರ್ನಲ್ಲಿ ಸೇರಿಸುವುದು ಬೇಡ ಎಂದು ಹೇಳಿದ್ದೇನೆ. ನಾಡಿನ ಸ್ವಾಮೀಜಿಗಳಿಗೆ ಗೌರವ ನೀಡಬೇಕಿದೆ ಎಂದರು. ಹೋರಾಟಗಾರರು ಆಹ್ವಾನಿಸಿದ ಹಿನ್ನೆಲೆಯಲ್ಲಿ ಸ್ವಾಮೀಜಿಗಳು ಅಲ್ಲಿಗೆ ಹೋಗಿದ್ದಾರೆ. ಅವರು ಗಲಾಟೆ ಸಂದರ್ಭದಲ್ಲಿ ಜನರನ್ನು ಸಮಾಧಾನ ಮಾಡಿರಬಹುದು. ಇದನ್ನು ಪರಿಶೀಲಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದರು. ಹೇಮಾವತಿ ಲಿಂಕ್ ಕೆನಾಲ್ ಯೋಜನೆ ರದ್ದು ಪಡಿಸಲು 20 ದಿನಗಳ ಗಡುವು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರ ತೀರ್ಮಾನಿಸಿರುವಂತೆ ಕಾಮಗಾರಿ ಮುಂದುವರಿಯಲಿದೆ. ಹೋರಾಟಗಾರರು ನಮಗೆ ಗಡುವು ನೀಡಿಲ್ಲ, ಸಮಯ ಕೊಡಿ, ನಮ್ಮ ಜತೆ ಮಾತನಾಡಿ ಎಂದು ಕೇಳಿದ್ದಾರೆ. ನಾನೂ ನೀರಾವರಿ ಖಾತೆ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿದ್ದು, ಅವರು ಸಮಯ ಕೊಟ್ಟಾಗ ಮಾತನಾಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಸರ್ಕಾರ ಯೋಜನೆ ಮಾಡುತ್ತಿದ್ದು, ಹೋರಾಟಗಾರರನ್ನು ಮನವೊಲಿಕೆ ಮಾಡುವ ಪ್ರಯತ್ನ ಮಾಡುತ್ತೇವೆ. ಅವರು ಸಹಕಾರ ನೀಡದಿದ್ದರೆ ಅದು ಬೇರೆ ಮಾತು. ಮೊದಲು ಒಂದು ಅವಕಾಶವನ್ನು ಹೋರಾಟಗಾರರಿಗೆ ನೀಡಬೇಕು, ನೀಡುತ್ತೇವೆ. ನೀರಾವರಿ ಸಚಿವರು ತೆಗೆದುಕೊಳ್ಳುವ ತೀರ್ಮಾನವೇ ಸರ್ಕಾರದ ತೀರ್ಮಾನವಾಗಿರುತ್ತದೆ ಎಂದರು. ನೀರಾವರಿ ಸಚಿವರು ಸಭೆ ನಡೆಸಲು ಸಮಯ ಕೇಳಿದ್ದಾರೆ. ನಮ್ಮ ಜಿಲ್ಲೆಯ ರಾಜಕೀಯ ಮುಖಂಡರು, ರೈತರ ಮುಖಂಡರ ಜತೆ ಸಭೆ ಮಾಡಿ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೀರ ಎಂದು ನಾನು ನೀರಾವರಿ ಸಚಿವರನ್ನೇ ಕೇಳಿದ್ದೀನಿ. ಅವರೇನು ಸಮಯ ಕೊಡುತ್ತಾರೆ ಅದು ನಂತರ ತೀಮಾರ್ನ ಮಾಡುತ್ತೇವೆ ಎಂದರು.