ಚಾಮರಾಜನಗರ: ಸ್ವಾಮಿ ವಿವೇಕಾನಂದರ ಆದರ್ಶಗಳು ಚಿಂತನೆ, ನುಡಿ, ವಿಚಾರಧಾರೆಗಳನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ವಿವೇಕಾನಂದರ ಕನಸನ್ನು ನನಸು ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಸಲಹೆ ನೀಡಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಸ್ಕೃತಿಯನ್ನು ನಾವು ಮರೆಯುತ್ತಿದ್ದೇವೆ. ಇತಿಹಾಸವನ್ನು ನಾವು ಓದಬೇಕು. ಶಿಕ್ಷಣದ ತೆಗೆ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು. ಸಮಾಜ ನಮಗೇನು ನೀಡಿದೆ ಎನ್ನುವ ಬದಲು ಸಮಾಜಕ್ಕೆ ನಾವೇನು ಕೊಡುಗೆ ನೀಡಬಹುದು ಎಂದು ಯೋಚಿಸಬೇಕು. ಸ್ವಾಮಿ ವಿವೇಕಾನಂದರು ಭಾರತಕ್ಕೆ ಮಾತ್ರವಲ್ಲದೇ ಪ್ರಪಂಚದ ಇತರೆ ದೇಶಗಳಿಗೂ ಸಹ ಅವರ ತತ್ವಗಳು, ಬದುಕಿದ ಹಾದಿ, ಯುವ ಜನತೆಗೆ ನೀಡಿದ ಸ್ಫೂರ್ತಿಯ ಕರೆಗಳಿಂದ ಇಂದಿಗೂ ಪ್ರಪಂಚದ ಆಧ್ಯಾತ್ಮಿಕ ಗುರುವಾಗಿದ್ದಾರೆ ಎಂದರು. ದೇಶವನ್ನು ಅಭಿವೃದ್ಧಿಯತ್ತ ಸಾಗಿಸುವಲ್ಲಿ ಅದ್ಬುತವಾದ ಪಾತ್ರವನ್ನು ಯುವಕರು ವಹಿಸಬೇಕು. ಪ್ರಸ್ತುತ ಯುವಜನತೆ ಸದೃಢ ಮತ್ತು ಧೈರ್ಯಶಾಲಿಯಾಗಿದ್ದರೆ ಮಾತ್ರ ಅವರು ಮುಂದೆ ಪರಿಪೂರ್ಣ ನಾಗರಿಕರಾಗಿ ಹೊರಹೊಮ್ಮಲು ಸಾಧ್ಯ. ಓದುವ ಸಮಯದಲ್ಲಿ ಏಕಾಗ್ರತೆ ಇರಬೇಕು ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಂಜಯ್ಯ ಮಾತನಾಡಿ, ಸ್ವಾಮಿ ವಿವೇಕಾನಂದರ ತತ್ವಗಳು ಮತ್ತು ಅವರ ಬದುಕಿನ ಹಾದಿ, ಆದರ್ಶಗಳು ನಮಗೆಲ್ಲರಿಗೂ ಸ್ಪೂರ್ತಿಯಾಗಬೇಕು. ಅವರು ತಮ್ಮ ಅಮೂಲ್ಯವಾದ ಚಿಂತನೆ ಮತ್ತು ಸ್ಫೂರ್ತಿದಾಯಕ ಮಾತುಗಳೊಂದಿಗೆ ಯುವಕರನ್ನು ಪ್ರೋತ್ಸಾಹಿಸುತ್ತಿದ್ದರು. ಇಂದಿಗೂ ಅದೆಷ್ಟೋ ಜನ ವಿವೇಕಾನಂದರ ಮಾತುಗಳ ಸ್ಪೂರ್ತಿಯ ನೆರಳಲ್ಲಿ ಸಾಗುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಟಿ.ಜೆ. ಸುರೇಶ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಎಸ್.ಜಿ.ಲೋಕೇಶ್ ಹಾಗೂ ಇತರರು ಹಾಜರಿದ್ದರು.