ಮೈಸೂರು; ಯುವಕರು ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಬೇಕು. ಪ್ರತಿಯೊಬ್ಬರೂ ಸಾಲು ಮರದ ತಿಮ್ಮಕ್ಕನ ಪರಿಸರ ಸೇವೆಯನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಸಮಾಜಕ್ಕೆ ಒಳಿತಾಗುತ್ತದೆ ಎಂದು ಮಹಿಳಾ ವಿಶೇಷ ಕನ್ನಡ ಮಾಸಿಕದ ಗೌರವ ಸಂಪಾದಕಿ ಗೀತಾ ರಾವ್ ಹೇಳಿದರು.
ಮಹಿಳಾ ವಿಶೇಷ ಕನ್ನಡ ಮಾಸಿಕ, ನಾಡಪ್ರಭು ಕೆಂಪೇಗೌಡ ಯುವ ಬ್ರಿಗೇಡ್, ನಿಮಿಷಾಂಬ ಮಹಿಳಾ ಮಂಡಳಿ ಹಾಗೂ ಯೂನಿಟಿ ಟ್ರಸ್ಟ್ ಸಹಯೋಗದಲ್ಲಿ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಪ್ಪಂದಿರು-ಅಮ್ಮಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ತ್ಯಾಗ ದೊಡ್ಡದು. ಮಕ್ಕಳು ಚೆನ್ನಾಗಿರಲಿ ಎಂದು ತಮ್ಮ ಕಷ್ಟ ಕಾರ್ಪಣ್ಯ ಲೆಕ್ಕಿಸದೇ ಪಾಲಕರು ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಾರೆ. ಆದರೆ ಮಕ್ಕಳು ಅದಕ್ಕೆ ಬೆಲೆ ನೀಡದೇ ದೂರವಾಗುತ್ತಾರೆ ಎಂದು ವಿಷಾದಿಸಿದರು.
ಪ್ರತಿಯೊಬ್ಬರೂ ಕೂಡ ವಯಸ್ಸಾದ ಕಾಲದಲ್ಲಿ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಗಂಡನ ಕಾಲವಾದ ನಂತರ ಮಹಿಳೆಯರಿಗೆ ಜೀವನ ನಿರ್ವಹಣೆ ಕಷ್ಟವಾಗುವುದರಿಂದ ಪ್ರತಿ ಕುಟುಂಬದಲ್ಲೂ ಹೆಣ್ಣು ಮಕ್ಕಳಿಗೆ ಸ್ತ್ರೀನಿಧಿ ಇಡಬೇಕು ಎಂದು ಸಲಹೆ ನೀಡಿದರು.
ಕೊಡಗು ಜಿಪಂ ಮಾಜಿ ಸದಸ್ಯ ಎಸ್.ಡಿ. ಕುಮುದಾ ಮಾತನಾಡಿ, ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಪಾತ್ರ ಮುಖ್ಯ ಎಂದರು.
ತಾಯಂದಿರನ್ನು ಕುರಿತು ಮಾತನಾಡಿದ ಅನಿತಾ, ಶಿವರಾಜಮ್ಮ, ರೇಖಾ, ತಂದೆಯರನ್ನು ಕುರಿತು ಮಾತನಾಡಿದ ಲಲಿತಾ, ಪ್ರಭಾಮಣಿ, ಶುಭಶ್ರೀ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು.
ಹಿರಿಯ ದಂಪತಿಗಳಾದ ಮಂಡ್ಯದ ರಾಮಚಂದ್ರ- ಪ್ರಭಾ, ನಂಜನಗೂಡಿನ ಜಯಪ್ರಕಾಶ್ ನಾರಾಯಣ-ಭಾಗ್ಯಾ, ಹಿರಿಯರಾದ ವರದರಾಜನ್, ವೆಂಕಟೇಶ್, ನಾಗರಾಜ್ ಅವರನ್ನು ಗೌರವಿಸಲಾಯಿತು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು. ನಿಮಿಷಾಂಬ ಮಹಿಳಾ ಮಂಡಳಿಯ ಅಧ್ಯಕ್ಷೆ ಭುವನೇಶ್ವರಿ, ಎಚ್.ವಿ. ಸುಬ್ಬರಾವ್, ಪುಷ್ಪಲತಾ ಇದ್ದರು.