ಜಿಲ್ಲೆ

ಸ್ವಾಭಿಮಾನದ ಸಂಕೇತವಾಗಿ ಬದುಕಿದ ಶರಣರು

ಯಾದಗಿರಿ: ಬಸವಾದಿ ಶರಣರು ಕಾಯದ ಮಹತ್ವವನ್ನು ಸಾರುವ ಮೂಲಕ ಮನುಕುಲಕ್ಕೆ ಸ್ವಾಭಿಮಾನದ ಸಂಕೇತವಾಗಿ ಬದುಕಿ ತೋರಿಸಿದ್ದಾರೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ತಿಳಿಸಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶರಣ ನುಲಿಯ ಚಂದಯ್ಯನವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನ ಮನುಕುಲಕ್ಕೆ ಸುವರ್ಣ ಯುಗವಾಗಿತ್ತು. ಶರಣ-ಶರಣೆಯರು ಕಾಯಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ವಚನಗಳನ್ನು ರಚಿಸಿ, ನಾಗರಿಕ ಸಮಾಜಕ್ಕೆ ಜೀವನದ ಸತ್ಯವನ್ನು ಪ್ರಚುರ ಪಡಿಸಿದವರು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದು ನಾವೆಲ್ಲ ಸಾಗಬೇಕಿದೆ ಎಂದರು.

ಚಂದಯ್ಯನವರ ಸಾಮಾಜಿಕ ಸುಧಾರಣೆ, ಎಲ್ಲರೂ ಒಂದೇ ಎಂಬ ಭಾವ, ಕಾಯಕ ನಿಷ್ಠೆ, ಲಿಂಗ ಪ್ರೇಮ ಇಂದು ನಮಗೆ ಆದರ್ಶವಾಗಬೇಕು. ಶರಣರು ಮಾಡಿದ ಕ್ರಾಂತಿಯ ಸುಧಾರಣೆಗಳು ಅದ್ಭುತವಾಗಿವೆ. ಜಾತಿ,ಮತಗಳ ಜಂಜಾಟವನ್ನು ತೊಲಗಿಸಲು ಶ್ರಮಿಸಿದ ಇವರ ವಚನಗಳಲ್ಲಿ ಧರ್ಮ,ನೀತಿ,ತತ್ವ,ಆಧ್ಯಾತ್ಮ ಹೀಗೆ ಪರಿಶುದ್ಧ ಜೀವನಕ್ಕೆ ಬೇಕಾದ ಎಲ್ಲ ಸಂಗತಿಗಳೂ ಅಡಕವಾಗಿವೆ ಎಂದು ಹೇಳಿದರು.

ಹಗ್ಗ ಹೊಸೆಯುವ ಕಾಯಕ ಮಾಡುತ್ತಿದ್ದ ಚಂದಯ್ಯನು ಒಮ್ಮೆ ಹುಲ್ಲಿನ ಹೊರೆ ಹೊತ್ತು ಬರುವಾಗ ಕೊರಳಲ್ಲಿನ ಲಿಂಗ ಜಾರಿ ಬೀಳುತ್ತದೆ. ಬಿದ್ದ ಲಿಂಗವು ತಾನಾಗಿಯೇ ಬರಲೆಂದು ಚಂದಯ್ಯ ದೃಢ ಸಂಕಲ್ಪ ಮಾಡಿ ಅದನ್ನು ಮುಟ್ಟಲಿಲ್ಲ. ಲಿಂಗವು ಚಂದಯ್ಯನ ಬೆನ್ನು ಹತ್ತಿ ಬಂದು, ತಪ್ಪು ಒಪ್ಪಿಕೊಂಡ ಮೇಲೆ ಅದನ್ನು ಕೊರಳಲ್ಲಿ ಧರಿಸಿಕೊಳ್ಳುತ್ತಾರೆ. ಭಾವ ಶುದ್ಧಿಯಿಂದ ಮಾಡುವುದು ಗುರುಪೂಜೆ, ಜ್ಞಾನ ಶುದ್ದಿಯಿಂದ ಮಾಡುವುದು ಲಿಂಗಪೂಜೆ ಎಂದು ಶರಣರು ಸಾರಿದ್ದಾರೆ ಎಂದು ವಿವರಿಸಿದರು.

ಉಪನ್ಯಾಸಕ ತಿಪ್ಪಣ್ಣ ಭಜಂತ್ರಿ ವಿಶೇಷ ಉಪನ್ಯಾಸ ನೀಡಿ, ಸಮಾಜದ ಸುಧಾರಣೆಗಾಗಿ ಕಾಯಕ ಸೇವೆಯೆ ಧರ್ಮವೆಂದು, ಅದರ ಮಹತ್ವವನ್ನು ಜನರಿಗೆ ಸಾರಿದ ಚಂದಯ್ಯನವರು ಆದರ್ಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡ ಶರಣ. ತಮ್ಮ ವಚನಗಳ ಮೂಲಕ ಸಮಾಜಕ್ಕೆ ಬೆಳಕು ನೀಡಿದವರಲ್ಲಿ ಅವರು ಸಹ ಒಬ್ಬರು. ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಶಿವಣಗಿ. ಮುಂದೆ ಕಲ್ಯಾಣಕ್ಕೆ ಬಂದು, ಕಾಯಕ ದಾಸೋಹಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಇಷ್ಟಲಿಂಗದಲ್ಲಿ ಅತ್ಮೋನ್ನತಿ ಕಂಡುಕೊಂಡರು. ಹುಲ್ಲಿನ ಹಗ್ಗ ಹೊಸೆಯುವ ಕಾಯಕ ಮಾಡಿ ಅದನ್ನ ಮಾರಿ ಬಂದ ಆದಾಯದಿಂದ ಗುರು,ಲಿಂಗ ಜಂಗಮ ಸೇವೆಗೆ ಬಳಸುತ್ತಿದ್ದರು ಎಂದು ಹೇಳಿದರು.

ಜೀವನದ ನಿರ್ವಹಣೆಗಾಗಿ ವೃತ್ತಿಯಲ್ಲಿ ಮೇಲು,ಕೀಳು ಎಂದು ಭಾವಿಸದೇ ತಾವು ಬೀಡುಬಿಟ್ಟ ಸ್ಥಳ ಹಾಗೂ ಸುತ್ತಮುತ್ತಲಿನ ಜಾಗಗಳಲ್ಲಿ ದೊರೆಯುವ ಪೊರಕೆ ತಂದು ಬುಟ್ಟಿ, ಚಾಪೆ, ಕಿತ್ತಾಳೆನಾಳು, ಮೆದೆ ಹಾಗೂ ಹುಲ್ಲುಗಳಿಂದ ಹುರಿ ಹಗ್ಗಗಳನ್ನು ಹೊಸೆದು ಜೀವನ ಸಾಗಿಸುವುದು. ಕೆಲವಡೆ ಸಣ್ಣಪುಟ್ಟ ವ್ಯಾಪಾರ ಮಹಿಳೆಯರು ಊರೂರು ತಿರುಗಿ ಕೊರವಂಜಿ ಕಣಿ ಹೇಳುವುದು ನಮ್ಮ ಸಂಸ್ಕೃತಿ ಮತ್ತು ಕುಲಕಸುಬು ಆಗಿದೆ. ಆದರೆ ಪಾಶ್ಚಾತ್ಯ ಸಂಗೀತದ ಹಾವಳಿಯಿಂದ ನಮ್ಮ ಸಂಪ್ರದಾಯ ನಶಿಸಿ ಹೋಗುತ್ತಿದ್ದು ನಾವು ಉಳಿಸಿಕೊಂಡು ಹೋಗಬೇಕಾಗಿದೆ ಎಂದರು.

ಜಿಲ್ಲಾಕಾರಿ ಡಾ.ಸುಶೀಲಾ ಬಿ., ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಕಾರಿ ಉತ್ತರಾದೇವಿ, ಸಮಾಜದ ಜಿಲ್ಲಾಧ್ಯಕ್ಷ ಕಾಶಪ್ಪ ಭಜಂತ್ರಿ, ಯಲಪ್ಪ ಭಜಂತ್ರಿ ವನದುರ್ಗ ಇದ್ದರು.